`ವಯಸ್ಕರಿಗೆ ಮಾತ್ರ’ ಎಂದು ಹೇಳಲಾದ ಭಾರತ ಮೂಲದ ಖಾರ ಬಳಸಿ ತಯಾರಿಸಿದ ಕ್ರಿಸ್ಪಿ ಚಿಪ್ಸ್ ಸೇವಿಸಿದ ಜಪಾನ್ ನ 14 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
`ಆಕಾ ಬಹುತ್ ಜೊಲೊಕಿಯಾ’ ಹೆಸರಿನ ಭಾರತ ಮೂಲದ ಕಂಪನಿ ಉತ್ಪನ್ನ ಕಾಳು ಮೆಣಸು ಬಳಸಿ ಹುರಿದ ಆಲೂಗಡ್ಡೆ ಚಿಪ್ಸ್ ಸೇವಿಸಿದ 30 ವಿದ್ಯಾರ್ಥಿಗಳಲ್ಲಿ 14 ಮಂದಿ ಅಸ್ವಸ್ಥಗೊಂಡಿದ್ದಾರೆ.
ಆಲೂಗಡ್ಡೆ ಚಿಪ್ಸ್ ಸೇವಿಸಿದ ಕೇವಲೇ ನಿಮಿಷಗಳಲ್ಲಿ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ವಾಕರಿಕೆ, ತಲೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜಿಗೆ ವಿದ್ಯಾರ್ಥಿಯೊಬ್ಬ 18 ವರ್ಷ ಮೇಲ್ಪಟ್ಟವರಿಗೆ ಹುರಿದ ಚಿಪ್ಸ್ ಎಂದು ಹೇಳಲಾದ ಚಿಪ್ಸ್ ಪ್ಯಾಕೆಟ್ ತಂದಿದ್ದು, 30 ವಿದ್ಯಾರ್ಥಿಗಳು ಹಂಚಿಕೊಂಡು ಸೇವಿಸಿದ್ದರು. ಚಿಪ್ಸ್ ಸೇವಿಸಿದ ಬೆನ್ನಲ್ಲೇ ಅವರಿಗೆ ಅನಾರೋಗ್ಯ ಕಾಡಿದ್ದು, ಎಲ್ಲರೂ ಆರೋಗ್ಯವಾಗಿದ್ದು, ಸಣ್ಣ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಹುತ್ ಜೊಲೊಕಿಯಾ ಖಾರ ಉತ್ತರ ಭಾರತದಲ್ಲಿ ಬೆಳೆಯಲಾಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ಖಾರದ ಮೆಣಸು ಆಗಿದ್ದು, ವಿಶ್ವದಾಖಲೆ ಹೊಂದಿದೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗತ್ತದೆ.
ಬಹುತ್ ಜೊಲೊಕಿಯಾ ಖಾರ ಬಳಸಿ ಇಬ್ರಾಕಿ ಪ್ರಿಫೆಕ್ಚರ್ ಕಂಪನಿ ಆಲೂಗಡ್ಡೆ ಚಿಪ್ಸ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದು, ಇದು ಅತ್ಯಂತ ಖಾರವಾದ ಚಿಪ್ಸ್ ಆಗಿರುವುದರಿಂದ ಮಕ್ಕಳು, ಹೊಟ್ಟೆ ಸಮಸ್ಯೆ ಅಥವಾ ರಕ್ತದೊತ್ತಡ ಇರುವ ರೋಗಿಗಳು ಸೇವಿಸಬಾರದು ಎಂದು ಕಂಪನಿ ಹೇಳಿದೆ.
ಈ ಖಾರದ ಚಿಪ್ಸ್ ಸೇವಿಸಿದರೆ ಖಾರ ಅರಗಿಸಿಕೊಳ್ಳುವುದು ಕಷ್ಟ. ಆದ್ದರಿಂದ ಅತಿಯಾದ ಖಾರ ಸೇವಿಸಲು ಇಷ್ಟಪಡುವವರಿಗೆ ಮಾತ್ರ ಸಿದ್ಧಪಡಿಸಲಾಗಿದೆ. ಆದರೂ ಇದನ್ನು ಸೇವಿಸುವಾಗ ಜಾಗೃತೆ ಅಗತ್ಯ. ಈ ಘಟನೆ ಆಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ವಿವರಿಸಿದೆ.