ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಪೊಲೀಸರು ಕಡಿವಾಣ ಹಾಕಿದ ಪರಿಣಾಮ ರಾಜ್ಯದಲ್ಲಿ ಅಪಘಾತ ಪ್ರಕರಣಗಳ ಪ್ರಮಾಣದಲ್ಲಿ ಶೇ.16ರಷ್ಟು ಕುಸಿತ ಕಂಡಿದೆ.
ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆ. ಇದರಿಂದ ಸಾವಿನ ಪ್ರಮಾಣದಲ್ಲಿ ಕುಸಿತ ಆಗಿರುವುದು ನೆಮ್ಮದಿಯ ವಿಷಯವಾಗಿದೆ.
2023ರ ಮೇ ತಿಂಗಳಿಂದ ಜುಲೈ ನಡುವಿನ ಅವಧಿಯಲ್ಲಿ ಅಪಘಾತಗಳಿಂದ 3122 ಮಂದಿ ಮೃತಪಟ್ಟಿದ್ದರು. ಆದರೆ ಈ ವರ್ಷ 3 ತಿಂಗಳ ಅವಧಿಯಲ್ಲಿ 2682 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಸರಾಸರಿ 29 ಆಗಿದ್ದರೆ, ಕಳೆದ ವರ್ಷ ಸಂಖ್ಯೆ 34 ಆಗಿತ್ತು.
ಕಳೆದ ವರ್ಷ ಮೇಯಿಂದ ಜುಲೈವರೆಗೂ ಬೆಂಗಳೂರು ನಗರದಲ್ಲಿ ಸಂಭವಿಸಿದ ಅಪಘಾತಗಳಲ್ಲಿ 412 ಮಂದಿ ಮೃತಪಟ್ಟಿದ್ದರೆ, ಈ ವರ್ಷದ ಇದೇ ಅವಧಿಯಲ್ಲಿ 192 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಪ್ರತಿದಿನ ಸಾವಿನ ಸಂಖ್ಯೆಯ ಪ್ರಮಾಣ 4ರಿಂದ 2ಕ್ಕೆ ಇಳಿಕೆಯಾಗಿದೆ.
ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಲು, ವೇಗದ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ, ರಸ್ತೆ ಮೂಲಸೌಕರ್ಯ ಕೊರತೆ, ಚಾಲಕರ ಅಜಾಗರೂಕ ಚಾಲನೆ ಕಾರಣವಾಗಿದೆ. ಅಪಘಾತ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ತೆಗೆದುಕೊಂಡ ಕ್ರಮಗಳು, ವೇಗದ ಮಿತಿ ನಿಗದಿ, ನಿರಂತರ ಡ್ರಂಕ್ & ಡ್ರೈವ್ ತಪಾಸಣೆ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿದವರ ವಿರುದ್ಧ ವಿಶೇಷ ಕಾರ್ಯಾಚರಣೆ, ಗೂಡ್ಸ್ ವಾಹನಗಳಿಗೆ ಶಿಸ್ತು ಪಥ, ಬ್ಲ್ಯಾಕ್ ಸ್ಪಾಟ್ ಗಳಲ್ಲಿರುವ ರಸ್ತೆ ಲೋಪದೋಷಗಳ ನಿವಾರಣೆಯಂತಹ ಕ್ರಮಗಳು ಅಪಘಾತದಲ್ಲಿ ಸಾವಿನ ಸಂಖ್ಯೆ ಕಡಿಮೆಗೊಳಿಸಲು ಕಾರಣವಾಗಿವೆ.
ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದವರ ಸಂಖ್ಯೆ
ಬೆಂಗಳೂರು-192
ಬೆಂಗಳೂರು ಗ್ರಾಮಾಂತರ-169
ತುಮಕೂರು-169
ಬೆಳಗಾವಿ-138
ಮಂಡ್ಯ-116
ಹಾಸನ-99
ಶಿವಮೊಗ್ಗ-99
ವಿಜಯಪುರ-77
ದಾವಣಗೆರೆ-66