ವಿಶ್ವದ ಅತ್ಯಂತ ದೊಡ್ಡ ಮರುಭೂಮಿ ಸಹಾರದಲ್ಲಿ 50 ವರ್ಷಗಳ ನಂತರ ಇದೇ ಮೊದಲ ಬಾರಿ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ.
ಉತ್ತರ ಆಫ್ರಿಕಾದ ಮೊರಾಕ್ಕೊ ಬಳಿಯ ಸಹಾರಾ ಮರುಭೂಮಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಳುಗಾಡಿನಲ್ಲೂ ನೀರು ನಿಂತಿರುವ ಫೋಟೊಗಳು ವೈರಲ್ ಆಗಿವೆ.
ರಾಜಧಾನಿ ರಾಬಟ್ ನಿಂದ 450 ಕಿ.ಮೀ. ದೂರದಲ್ಲಿರುವ ಟಗೊನೈಟ್ ಗ್ರಾಮ ನೀರಿನಲ್ಲಿ ಮುಳುಗಿ ಹೋಗಿದೆ. ನಾಸಾ ಸ್ಯಾಟಲೈಟ್ ನಿಂದ ಫೋಟೊಗಳನ್ನು ಸಂಗ್ರಹಿಸಿದ್ದು, ಜಗೊರಾ ಮತ್ತು ಟಾಟಾ ನಡುವಿನ ಇರುಕಿ ಕೆರೆ ಅರ್ಧಶತಮಾನದ ನಂತರ ನೀರು ಕಂಡಿದ್ದು, ಇದೇ ಮೊದಲ ಬಾರಿ ತುಂಬಿ ಹರಿಯುತ್ತಿದೆ.
ಸುಮಾರು 30ರಿಂದ 50 ವರ್ಷಗಳ ನಂತರ ಇದೇ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದ ಮಳೆ ನೋಡುತ್ತಿದ್ದೇವೆ ಎಂದು ಮೊರಕ್ಕೊದ ಹವಾಮಾನ ಇಲಾಖೆ ಅಧಿಕಾರಿ ಹೇಳಿದ್ದಾರೆ.
ಮೊರಾಕ್ಕೊದಲ್ಲಿ ಭಾರೀ ಮಳೆಯಿಂದ 18 ಮಂದಿ ಮೃತಪಟ್ಟಿದ್ದು, ಭಾರೀ ಮಳೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅಟ್ಲಾಂಟಿಕಾದಲ್ಲಿ ಸೃಷ್ಟಿಯಾಗಿರುವ ಚಂಡಮಾರುತಗಳ ಪರಿಣಾಮ ಮರಭೂಮಿ ಕೂಡ ನೀರು ನೋಡುವಂತಾಗಿದೆ.
ಹವಾಮಾನ ವೈಪರಿತ್ಯದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಚಂಡಮಾರುತಗಳು ಸೃಷ್ಟಿಯಾಗಲಿದ್ದು, ಇಂತಹ ವೈಪರಿತ್ಯಗಳನ್ನು ನೋಡಬಹುದು. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.