ಬೆಂಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿಖರತೆ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಬೋಧನಾ ಪದ್ಧತಿಯ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟವಾಗಿದೆ.
ಇನ್ನು ಮುಂದೆ ದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿಯನ್ನು ಹಳೆಯ ಕಾಗದದ ದಾಖಲೆಗಳ ಬದಲಾಗಿ, ಡಿಜಿಟಲ್ ಪೋರ್ಟಲ್ ಅಥವಾ ಆ್ಯಪ್‌ಗಳ ಮೂಲಕ ನೈಜ ಸಮಯವನ್ನು ದಾಖಲಿಸುವುದು ಕಡ್ಡಾಯವಾಗಿದೆ.
ಶಿಕ್ಷಣ ಇಲಾಖೆಯು ಈ ಕಠಿಣ ಕ್ರಮವನ್ನು ಕೈಗೊಳ್ಳಲು ಪ್ರಮುಖವಾಗಿ ಈ ಕೆಳಗಿನ ಕಾರಣಗಳನ್ನು ಗುರುತಿಸಿದೆ. ಪ್ರತಿ ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದಾರೆ ಎಂಬ ನಿಖರ ಮಾಹಿತಿ ಮೇಲಧಿಕಾರಿಗಳಿಗೆ ತಕ್ಷಣ ಲಭ್ಯವಾಗುತ್ತದೆ.
ಪಾರದರ್ಶಕತೆ ಮತ್ತು ಜವಾಬ್ದಾರಿ:
ಶಿಕ್ಷಕರ ಶಾಲೆಗೆ ಬರುವ ಸಮಯ, ವಿಳಂಬ ಮತ್ತು ಅನಧಿಕೃತ ರಜೆಗಳನ್ನು ತಡೆಯಲು ಇದು ಸಹಕಾರಿಯಾಗಿದೆ.ವಿದ್ಯಾರ್ಥಿಗಳ ನಿಖರ ಹಾಜರಾತಿಯ ಆಧಾರದ ಮೇಲೆ, ಅಂದಿನ ಬಿಸಿಯೂಟದ ಪ್ರಮಾಣವನ್ನು ನಿಗದಿಪಡಿಸಲು ಮತ್ತು ಸಂಪನೂಲಗಳ ದುರುಪಯೋಗವನ್ನು ತಡೆಯಲು ಸಹಾಯವಾಗುತ್ತದೆ. ಕೈಯಾರೆ ದಾಖಲೆಗಳನ್ನು ನಿರ್ವಹಿಸುವ ಸಮಯ ಉಳಿತಾಯವಾಗುತ್ತದೆ ಮತ್ತು ಮಾಹಿತಿಯ ಸಂಗ್ರಹಣೆಯಲ್ಲಿ ತಪ್ಪುಗಳು ಕಡಿಮೆಯಾಗುತ್ತವೆ.
ಮೊಬೈಲ್ ಆ್ಯಪ್ ಬಳಕೆ:
ಶಿಕ್ಷಕರು ತಮ ವೈಯಕ್ತಿಕ ಲಾಗಿನ್ ಐಡಿ ಬಳಸಿಕೊಂಡು ನಿಗದಿತ ಆ್ಯಪ್ ಮೂಲಕ ಬೆಳಗ್ಗೆ ಮತ್ತು ಸಂಜೆ ತಮ ಹಾಜರಾತಿಯನ್ನು ದಾಖಲಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ಸಹ ಅದೇ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು.
ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕೆಲವು ಕಡೆ ಜಾರಿಗೊಳಿಸಲಾಗಿದೆ. ನಿಗದಿತ ಸಮಯದ ನಂತರ ಬರುವ ಶಿಕ್ಷಕರನ್ನು ತಡವಾಗಿ ಬಂದವರು ಅಥವಾ ಗೈರು ಎಂದು ಪರಿಗಣಿಸಲಾಗುತ್ತದೆ.
ತಾಂತ್ರಿಕ ದೋಷಗಳು ಅಥವಾ ನೆಟ್ವರ್ಕ್ ಸಮಸ್ಯೆಗಳಿದ್ದಾಗ ಮಾತ್ರ ಆಫ್‌ಲೈನ್ ದಾಖಲೆಗಳಿಗೆ ಅವಕಾಶ ನೀಡಲಾಗುತ್ತದೆ. ಉಳಿದ ಸಮಯಗಳಲ್ಲಿ ಡಿಜಿಟಲ್ ಹಾಜರಾತಿಯೇ ಅಂತಿಮ. ಮೇಲ್ವಿಚಾರಣೆ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇತರ ಮೇಲ್ವಿಚಾರಕರು ತಮ ವ್ಯಾಪ್ತಿಯ ಶಾಲೆಗಳ ಡಿಜಿಟಲ್ ಹಾಜರಾತಿಯನ್ನು ನಿರಂತರವಾಗಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ದ್ವಿಭಾಷಾ ನೀತಿ ಜಾರಿ:
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಾತೃಭಾಷೆಯ (ಕನ್ನಡ) ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಕಲಿಸಿ, ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸುವುದು. 2026-27ನೇ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುತ್ತಿದೆ.
ಡಿಎಸ್‌ಇಆರ್‌ಟಿ ವತಿಯಿಂದ ರಾಜ್ಯದ ಸುಮಾರು 1.55 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್ ನೀಡಲಾಗಿದೆ.ಪಠ್ಯಪುಸ್ತಕಗಳು: ಗಣಿತ ಮತ್ತು ಪರಿಸರ ವಿಜ್ಞಾನ ವಿಷಯಗಳಿಗೆ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಪಠ್ಯಪುಸ್ತಕಗಳನ್ನು ಈಗಾಗಲೇ ಶಾಲೆಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ.



