ನಿವೃತ್ತ ಅಧ್ಯಾಪಕ ದಂಪತಿಯ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳನೊಬ್ಬ ಕ್ಷಮೆ ಕೋರಿ ತಿಂಗಳೊಳಗೆ ಕದ್ದ ವಸ್ತುವನ್ನು ಮರಳಿಸುವುದಾಗಿ ಭರವಸೆ ನೀಡಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೇಘ್ನಾಪುರಂನ ಸಂತಕುಲಂ ರಸ್ತೆಯಲ್ಲಿರುವ ನಿವೃತ್ತ ಅಧ್ಯಾಪಕ ದಂಪತಿ ಸೆಲ್ವಿನ್ ಮತ್ತು ಪತ್ನಿ ಚೆನ್ನೈನಲ್ಲಿರುವ ಮಗನನ್ನು ನೋಡಲು ಜೂನ್ 17ರಂದು ತೆರಳಿದ್ದಾಗ ಈ ಘಟನೆ ನಡೆದಿದೆ.
ಮನೆಯಲ್ಲಿ ಇಲ್ಲದ ವೇಳೆ ಮನೆ ಸ್ವಚ್ಛವಾಗಿ ಇಟ್ಟುಕೊಳ್ಳಲು ಸೆಲ್ವಿನ್ ಸ್ಥಳೀಯರ ನೆರವನ್ನು ಪಡೆದಿದ್ದರು. ಆದರೆ ಜೂನ್ 26ರಂದು ಮನೆಗೆ ಮರಳಿದಾಗ ಬಾಗಿಲು ತೆರೆದಿದ್ದು, ಮನೆಯೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಕೂಡಲೇ ಮನೆಯಲ್ಲಿ ಪರಿಶೀಲಿಸಿದಾಗ 60 ಸಾವಿರ ರೂ. ನಗದು ಹಾಗೂ 12 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾನು ಕಳುವಾಗಿರುವುದು ತಿಳಿದು ಬಂದಿತು.
ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಕ್ಷಮಾಪಣೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ಶೀಘ್ರದಲ್ಲೇ ನಿಮ್ಮ ವಸ್ತು ಹಾಗೂ ಹಣವನ್ನು ಒಂದು ತಿಂಗಳಲ್ಲಿ ವಾಪಸ್ ಮಾಡುವುದಾಗಿ ಕಳ್ಳ ಬರೆದಿದ್ದಾನೆ.
ನಮ್ಮ ಮನೆಯಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನನ್ನನ್ನು ಕ್ಷಮಿಸಿ ನಿಮ್ಮ ವಸ್ತುಗಳನ್ನು ಒಂದು ತಿಂಗಳಲ್ಲಿ ಹಿಂತಿರುಗಿಸುತ್ತೇನೆ ಎಂದು ಕ್ಷಮಾಪಣೆ ಪತ್ರದಲ್ಲಿ ಕಳ್ಳ ಬರೆದಿದ್ದಾನೆ.
ಕೇರಳದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಇಂತಹ ಒಂದು ಘಟನೆ ನಡೆದಿತ್ತು. ಮಗುವಿನ ಕತ್ತಲ್ಲಿ ಇದ್ದ ಚಿನ್ನದ ನಕ್ಲೇಸ್ ಕದ್ದಿದ್ದ ಕಳ್ಳ ಕ್ಷಮೆ ಕೋರಿ ಪತ್ರ ಕೊಟ್ಟಿದ್ದ.