ದುಡ್ಡು ಕೊಟ್ಟರೆ ಹೆರಿಗೆ ಮಾಡಿಸ್ತಾರೆ ಇಲ್ಲಾಂದ್ರ ನೋಡೋದೇ ಇಲ್ಲ… ದುಡ್ಡು ಕೊಡದೇ ಇದ್ದರೆ ತಾಯಿ ಕಾರ್ಡ್ ಕಿತ್ತುಕೊಂಡು ಇಟ್ಟುಕೊಳ್ತಾರೆ… ಹರಿದ ಹಾಸಿಗೆ, ಶೌಚಾಲಯದಲ್ಲಿ ನೀರೇ ಇರಲ್ಲ…
ಹೀಗೆ ಮುಖ್ಯ ಲೋಕಾಯುಕ್ತ ಬಿಎಸ್ ಪಾಟೀಲ್ ಮತ್ತು ಉಪ ಲೋಕಾಯುಕ್ತ ನ್ಯಾ.ಫಣೀಂದ್ರ, ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಮೂರು ತಂಡಗಳು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ ದಾಳಿ ನಡೆಸಿದಾಗ ರೋಗಿಗಳು ದೂರುಗಳ ಸುರಿಮಳೆ ಸುರಿಸಿದರು.
ಲೋಕಾಯುಕ್ತ ಅಧಿಕಾರಿಗಳ ಮೂರು ತಂಡಗಳಾಗಿ ಆಸ್ಪತ್ರೆಯನ್ನು ಪರಿಶೀಲಿಸಿದಾಗ ಶೌಚಾಲಯದಲ್ಲಿ ಕಿತ್ತುಹೋದ ಫ್ಲಶ್, ನೀರು ಇಲ್ಲದೇ ಇರುವುದು, ಸ್ವಚ್ಛತೆ ಕಾಪಾಡದೇ ಇರುವುದು ಕಂಡು ಬಂದರೆ ಮತ್ತೊಂದೆಡೆ ಕಟ್ಟಡದಲ್ಲಿ ಎಲ್ಲೆಡೆ ಧೂಳು ಕೂತಿದ್ದು, ಹರಿದ ಹಾಸಿಗೆ, ಹಳೆ ಮಂಚ ಕಂಡು ಬಂದಿತು.
ಆಸ್ಪತ್ರೆಯಲ್ಲಿ ೫ ವೈದ್ಯರನ್ನು ನೇಮಿಸಲಾಗಿದ್ದರೂ ಕೇವಲ ಒಬ್ಬ ವೈದ್ಯ ಮಾತ್ರ ಕರ್ತವ್ಯದಲ್ಲಿ ಇದ್ದರು. ಉಳಿದ ನಾಲ್ವರು ಬಂದಿರಲಿಲ್ಲ. ಅಲ್ಲದೇ ಉಳಿದ ಸಿಬ್ಬಂದಿ ಕೂಡ ಸಾಕಷ್ಟು ಕೊರತೆ ಕಂಡುಬಂದಿದ್ದು, ದಾಖಲಾತಿಗಳನ್ನು ಪರಿಶೀಲಿಸಿದರು.
ಚಿಕಿತ್ಸೆಗೆ ಬಂದಿದ್ದವರು ಹಾಗೂ ಒಳರೋಗಿಗಳನ್ನು ಭೇಟಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದಾಗ ಲಂಚ ನೀಡದೇ ಇಲ್ಲಿ ಏನೂ ನಡೆಯಲ್ಲ ಎಂದು ಆರೋಪಿಸಿದರು. ಎಷ್ಟು ದುಡ್ಡು ಕೊಟ್ಟಿದ್ದೀರಿ ಎಂಬ ಪ್ರಶ್ನೆಗೆ ದುಡ್ಡು ಎಷ್ಟು ಕೊಟ್ಟಿದ್ದೀವಿ ಹೇಳಲ್ಲ. ಏಕೆಂದರೆ ಇಲ್ಲಿ ಪ್ರತಿಯೊಬ್ಬರು ದುಡ್ಡು ಕೊಡಬೇಕು. ದುಡ್ಡು ಕೊಡಲಿಲ್ಲ ಅಂದರೆ ವೈದ್ಯರು ನೋಡೋದೇ ಇಲ್ಲ ಎಂದರು.
ಹೆರಿಗೆ ವಾರ್ಡ್ ನಲ್ಲಿ ಬಾಣಂತಿಯರನ್ನು ಪ್ರಶ್ನಿಸಿದಾಗ ಪ್ರತಿಯೊಬ್ಬರೂ ಇಲ್ಲಿ ಹಣ ಕೇಳ್ತಾರೆ. ನಾವು ಹೇಗೆ ಹಣ ನೀಡೋದು. ಹಣ ಇಲ್ಲ ಅಂತನೇ ನಾವು ಸರ್ಕಾರಿ ಆಸ್ಪತ್ರೆಗೆ ಬಂದಿದ್ದೇವೆ. ಹಣ ಕೊಡಲಿಲ್ಲ ಅಂತ ಕೆಲವರ ‘ತಾಯಿ ಕಾರ್ಡ್’ ಅನ್ನು ಕಿತ್ತುಕೊಂಡಿದ್ದಾರೆ.
ಕನಿಷ್ಠ ೫೦೦ ರೂ. ಕೊಟ್ಟರೆ ಮಾತ್ರ ಚಿಕಿತ್ಸೆ ಕೊಡುತ್ತಾರೆ. ಇಲ್ಲದಿದ್ದರೆ ನರ್ಸ್, ವಾರ್ಡನ್ಗಳು ಕಿರುಕುಳ ಕೊಡುತ್ತಾರೆ. ದುಡ್ಡು ತಗೋಳಕ್ಕೆ ಅಂತಾನೇ ಒಂದು ಕೊಠಡಿ ಇದೆ. ಆ ರೂಮಿಗೆ ಹೋಗಿ ಹಣ ನೀಡಬೇಕು ಎಂದು ಮಹಿಳೆಯೊಬ್ಬರು ಆರೋಪಿಸಿದರು.
ಡಿ ಗ್ರೂಪ್ ನೌಕರರು, ನರ್ಸ್ ದುಡ್ಡು ಕೇಳ್ತಾರೆ ಅಂತಾ ಸುಮಾರು ಜನ ಬಂದು ಹೇಳಿದರು. ಆದರೆ, ಇಲ್ಲಿ ಬಂದಾಗ ಒಬ್ಬ ಮಹಿಳೆ ಬಿಟ್ಟರೆ ಯಾರೂ ನೇರವಾಗಿ ದೂರು ಕೊಡಲು ಮುಂದೆ ಬರುತ್ತಿಲ್ಲ. ದುಡ್ಡು ಕೊಟ್ಟಿಲ್ಲ ಅಂದರೆ ರೋಗಿಗಳನ್ನ ಅಟೆಂಡ್ ಮಾಡಲ್ಲ ಎಂದು ಮುಖ್ಯ ಲೋಕಾಯುಕ್ತ ಬಿಎಸ್ ಪಾಟೀಲ್ ಹೇಳಿದರು.
ವೈದ್ಯರನ್ನು ವಿಚಾರಿಸಿದಾಗ ಎಲ್ಲಾ ಸರಿ ಇದೆ ಅಂತಾರೆ. ೨ ಗಂಟೆಯಿಂದ ಪರಿಶೀಲನೆ ಮಾಡುತ್ತಿದ್ದೀವಿ. ವ್ಹೀಲ್ ಚೇರ್ ಸಿಕ್ಕಿಲ್ಲ ಅಂತ ಒಬ್ಬರು ಓಡಾಡುತ್ತಿದ್ದಾರೆ. ಇದರ ಬಗ್ಗೆ ಮೆಡಿಕಲ್ ಡಿಪಾರ್ಟ್ಮೆಂಟ್‌ಗೆ ಹೇಳಿದ್ದೇವೆ. ಈ ಬಗ್ಗೆ ನಾವು ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.
ನಗರದ ಪ್ರಮುಖ ಆಸ್ಪತ್ರೆಯಲ್ಲೇ ಈ ಗತಿ ಆದರೆ ಹೇಗೆ? ಇದನ್ನ ಗಂಭೀರವಾಗಿ ಪರಿಗಣಿಸ್ತೀವಿ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಡ್ತೀವಿ. ಸಿಬ್ಬಂದಿ ಕಡಿಮೆ ಇದ್ದರೆ ಮಾಹಿತಿ ತರಿಸ್ತೀವಿ. ಮೇಲಾಧಿಕಾರಿಗಳ ಮೂಲಕ ವಿಚಾರಣೆ ಮಾಡ್ತೀವಿ. ಮಾನಿಟರಿಂಗ್ ಮಾಡಬೇಕು. ಆದರೆ ಮಾಡ್ತಿಲ್ಲ. ಓಪಿಡಿ ಸರ್ಜನ್ ಎಲ್ಲರೂ ಗಮನ ಹರಿಸಬೇಕಿತ್ತು. ವೈದ್ಯರು ಯಾರೂ ಬರ್ತಿಲ್ಲ. ಐದು ಜನ ವೈದ್ಯರಲ್ಲಿ ಒಬ್ಬರು ಇದ್ದಾರೆ. ವೈದ್ಯರಿಗೆ ನೋಟಿಸ್ ಕೊಡ್ತೀವಿ ಎಂದು ಅವರು ಹೇಳಿದರು.