ಮಹಿಳಾ ಜಡ್ಜ್ ಸೇರಿದಂತೆ 50 ಮಹಿಳೆಯರಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದ ವ್ಯಕ್ತಿ ದೆಹಲಿ ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮ್ಯಾಟ್ರೊಮೊನಿಯೊದಲ್ಲಿ ಹಲವು ಖಾತೆಗಳನ್ನು ಹೊಂದಿದ್ದ ಉತ್ತರ ಪ್ರದೇಶದ ಪ್ರತಾಪ್ ಗಢ್ ನಿವಾಸಿ 38 ವರ್ಷದ ಮುಖೀಮ್ ಖಾನ್ ಬಂಧಿತ ಆರೋಪಿ.
ಮುಖೀಮ್ ಖಾನ್ ಪರಿಚಯ ಬೆಳೆಸಿಕೊಂಡು ನಂತರ ವಿಶ್ವಾಸ ಗಳಿಸುತ್ತಿದ್ದ. ವಿಶ್ವಾಸ ಗಳಿಸುತ್ತಿದ್ದಂತೆ ಮದುವೆ ಪ್ರಸ್ತಾಪ ಮುಂದಿಡುತ್ತಿದ್ದ. ಇದೇ ನೆಪದಲ್ಲಿ ಅವರಿಂದ ಹಣ, ಆಭರಣ ಕೈಗೆ ಸಿಗುತ್ತಿದ್ದಂತೆ ನಾಪತ್ತೆಯಾಗುತ್ತಿದ್ದ. ಮಹಿಳಾ ಜಡ್ಜ್ ಕೂಡ ಈತನ ವಂಚನೆ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು ಮಾತ್ರವಲ್ಲ, ವಂಚನೆಗೂ ಒಳಗಾಗಿರುವುದು ಅಚ್ಚರಿಯ ವಿಷಯ.
ಅವಿವಾಹಿತೆ, ವಿಧವೆ ಹಾಗೂ ವಿಚ್ಛೇದನ ಪಡೆದಿದ್ದ ಮುಸ್ಲಿಮ್ ಮಹಿಳೆಯರನ್ನೇ ಈತ ಗುರಿಯಾಗಿಸಿಕೊಂಡು ಮದುವೆ ಪ್ರಸ್ತಾಪ ಮಾಡಿ ವಂಚಿಸುತ್ತಿದ್ದ. ತಾನೊಬ್ಬ ಸರ್ಕಾರಿ ನೌಕರ ಎಂದು ಹೇಳಿಕೊಳ್ಳುತ್ತಿದ್ದ ಮುಖೀಮ್ ಖಾನ್, ಪತ್ನಿ ಮೃತಪಟ್ಟಿದ್ದು. ಮಗು ನೋಡಿಕೊಳ್ಳಲು ಕಷ್ಟ ಆಗುತ್ತಿದೆ ಎಂದು ಕಥೆ ಕಟ್ಟುತ್ತಿದ್ದ.
ಆದರೆ ಮುಖೀಮ್ ಖಾನ್ ಗೆ ಮದುವೆ ಆಗಿ ಮೂರು ಮಕ್ಕಳಿದ್ದು, ಇವರ ಫೋಟೊಗಳನ್ನು ತೋರಿಸಿ ಮಹಿಳೆಯರಿಗೆ ಬಲೆ ಬೀಸುತ್ತಿದ್ದ. ಮಹಿಳೆಯರ ಕುಟುಂಬದವರನ್ನು ಭೇಟಿ ಮಾಡಿ ಮದುವೆ ದಿನಾಂಕ ನಿಗದಿಪಡಿಸಿಕೊಳ್ಳುತ್ತಿದ್ದ. ಮದುವೆಗೆ ಖರ್ಚಿಗೆ ಹಾಗೂ ಕಲ್ಯಾಣ ಮಂಟಪ ಬುಕ್ ಮಾಡಲು ಹಣ ಪಡೆದು ನಂತರ ನಾಪತ್ತೆಯಾಗುತ್ತಿದ್ದ.
ಮದುವೆ ಆದ 6 ವರ್ಷಗಳ ನಂತರ ಮ್ಯಾಟ್ರಿಮೊನಿಯೊದಲ್ಲಿ 2020ರ ವೇಳೆ ಖಾತೆ ತೆರೆದ ಈತ, ವಡೋದರಾದಲ್ಲಿ ಹೆಣ್ಣು ಮಗು ಹೊಂದಿದ್ದ ವಿಧವೆಯನ್ನು ಮೊದಲ ಬಾರಿ ಬಲೆಗೆ ಹಾಕಿಕೊಂಡಿದ್ದ. ಪರ್ಸ್ ಕಳೆದು ಹೋಗಿದೆ ಎಂದು ಆಕೆಯ ಬಳಿ 30 ಸಾವಿರ ಪಡೆದಿದ್ದ. ನಂತರ ಆಕೆಗೆ ಹಣ ವಾಪಸ್ ಮಾಡಿದ ನಂತರ ಆಕೆಯೊಂದಿಗೆ ಕೆಲವು ಸಮಯ ವಾಸ ಮಾಡಿದ. ಇದರಿಂದ ಸುಲಭವಾಗಿ ಹಣ ಮಾಡುವ ಉಪಾಯ ಕಂಡುಕೊಂಡಿದ್ದ.
ವಿವಿಧ ರಾಜ್ಯಗಳಲ್ಲಿ ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಿರುವ ಮುಖೀಮ್ ಖಾನ್, ದೆಹಲಿಯಲ್ಲಿ ಇದೇ ರೀತಿ ಮತ್ತೊಬ್ಬ ಮಹಿಳೆಯನ್ನು ಮದುವೆ ಆಗಿ ವಂಚಿಸಿದ್ದ ಎಂದು ದೆಹಲಿ ಕ್ರೈಂ ಪೊಲೀಸರು ತಿಳಿಸಿದ್ದಾರೆ.