Sunday, July 12, 2026
Google search engine
Homeರಾಜ್ಯತೆಂಗಿಗೆ ಕಪ್ಪು ತಲೆ ಹುಳು ಬಾಧೆ ನಿಯಂತ್ರಣಕ್ಕೆ ತಜ್ಞರ ವರದಿಯ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ...

ತೆಂಗಿಗೆ ಕಪ್ಪು ತಲೆ ಹುಳು ಬಾಧೆ ನಿಯಂತ್ರಣಕ್ಕೆ ತಜ್ಞರ ವರದಿಯ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಕರ್ನಾಟಕದ ತೆಂಗು ಬೆಳೆಗಾರರಿಗೆ ಕಾಡುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಂಬಂಧ ಕೂಡಲೇ ತಜ್ಞರಿಂದ ವರದಿ ಪಡೆದು ಪ್ರಸ್ತಾವನೆ ಮಂಡಿಸುವಂತೆ ತೋಟಗಾರಿಕಾ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತೆಂಗು ಬೆಳೆಗೆ ಕಪ್ಪು ತಲೆ ಹುಳುವಿನ (Black-headed Caterpillar) ಬಾಧೆ ವ್ಯಾಪಕವಾಗಿ ಕಾಡುತ್ತಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹುಳುವಿನ ಹಾವಳಿಯಿಂದ ತೆಂಗಿನ ಮರಗಳು ಗಂಭೀರವಾಗಿ ಹಾನಿಗೊಳಗಾಗುತ್ತಿದ್ದು, ಕೂಡಲೇ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ದಿನೇಶ್‌ ಗೂಳಿಗೌಡ,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದರು.

ಸರ್ಕಾರ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಸಲಹೆಗಳನ್ನೂ ನೀಡಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ತಜ್ಞರಿಂದ ವರದಿ ಪಡೆದು ಪ್ರಸ್ತಾವನೆ ಮಂಡಿಸುವಂತೆ ತೋಟಗಾರಿಕಾ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಮನವಿ ಪತ್ರದಲ್ಲೇನಿದೆ?

ಮಂಡ್ಯ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ತೆಂಗು ಬೆಳಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇತ್ತಿಚಿನ ವರ್ಷಗಳಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಕಂಬಳಿ ಹುಳುವು ಬಾಧೆಯು ಹೆಚ್ಚಾಗಿದ್ದು, ಸದರಿ ಕೀಟವು ತೆಂಗು ಬೆಳೆಯುವ ಕರಾವಳಿ ಹಾಗೂ ಮೈದಾನ ಪ್ರದೇಶಗಳಲ್ಲಿ ತೆಂಗಿನ ಬೆಳೆಗೆ ಹೆಚ್ಚಾಗಿ ಹಾನಿಯುಂಟು ಮಾಡುತ್ತಿದೆ. ಮರಿಹುಳು ಎಲೆಗಳ ತಳ ಭಾಗದಲ್ಲಿ ತನ್ನ ಹಿಕ್ಕೆ ಹಾಗೂ ನೂಲಿನಿಂದ ನಿರ್ಮಿಸಿದ ಸುರಂಗಗಳಲ್ಲಿ ವಾಸಿಸುತ್ತಾ, ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಸಸ್ಯಗಳ ದ್ಯುತಿಸಂಶ್ಲೇಷಣಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದರಿಂದ ಹಾನಿ ಹೆಚ್ಚಾದಾಗ ಮರಗಳು ಬೆಂಕಿಯಿಂದ ಸುಟ್ಟಂತೆ ಕಂಡು ಬರುತ್ತದೆ. ಈ ಹುಳದ ಹತೋಟಿ ಕೈಗೊಳ್ಳದಿದ್ದಲ್ಲಿ ಶೇಕಡಾ 80 ರವರೆಗೆ ಉತ್ಪಾದನೆಯು ಕುಂಠಿತವಾಗುತ್ತದೆ.

ಈ ಕೀಟವು ಗಾಳಿಯ ಮೂಲಕ ವೇಗವಾಗಿ ಹರಡುವುದರಿಂದ, ಇದರ ನಿಯಂತ್ರಣವನ್ನು ಗುಚ್ಛಾ ಮಾದರಿಯಲ್ಲಿ ಸಮರೋಪಾದಿಯಲ್ಲಿ ಹಾನಿಗೊಳಗಾಗಿರುವ ಎಲ್ಲಾ ರೈತರು ಕೈಗೊಂಡಲ್ಲಿ ಮಾತ್ರ ನಿರ್ವಹಣೆ ಜೊತೆಗೆ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಿರುತ್ತದೆ. ಆದರಿಂದ ಇದರ ನಿಯಂತ್ರಣಕ್ಕೆ ತುರ್ತು ಕ್ರಮಗಳು ಬೇಕಿವೆ. ಈ ಸಮಸ್ಯೆ ತೀವ್ರವಾಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯು ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ, ಸಮಸ್ಯೆಯ ಉಲ್ಬಣವನ್ನು ತಡೆಯಲು ಇನ್ನಷ್ಟು ವ್ಯಾಪಕ ಕ್ರಮಗಳ ಅವಶ್ಯಕತೆಯಿದೆ.

ಅಗತ್ಯ ಹೆಚ್ಚುವರಿ ಕ್ರಮಗಳು:

ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿಯು ಈ ಕೀಟ ಬಾಧೆಯನ್ನು ನಿಯಂತ್ರಿಸಲು ಬೇವು ಆಧಾರಿತ ಕೀಟನಾಶಕಗಳ ಬಳಕೆ, ಬೇರಿನ ಪೋಷಣೆ, ತಜ್ಞರ ಮಾರ್ಗದರ್ಶನದಲ್ಲಿ ‘ಗೋನಿಯೋಜಸ್ ಪರತಂತ್ರ ಜೀವಿಗಳನ್ನು’ ಮರಗಳಿಗೆ ಬಿಡುಗಡೆ ಮಾಡುವುದು ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮೂಲಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ದೀರ್ಘಕಾಲೀನ ಪರಿಹಾರಕ್ಕಾಗಿ ಈ ಕೆಳಗಿನ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ.

ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು

1. ವ್ಯಾಪಕ ಸಮೀಕ್ಷೆ ಮತ್ತು ಕಾರ್ಯಪಡೆ ರಚನೆ: ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷವಾಗಿ ಬಾಧಿತವಲ್ಲದ ಪ್ರದೇಶಗಳಿಗೂ ವಿಸ್ತರಿಸಿ, ಸಮಗ್ರ ಸಮೀಕ್ಷೆ ನಡೆಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ರೈತ ಸಹಾಯಕರನ್ನು ನೇಮಿಸುವುದು ಅತ್ಯವಶ್ಯಕವಾಗಿದೆ. ಇದರಿಂದಾಗಿ ಕೀಟಬಾಧೆಯ ನಿಖರ ಪ್ರಮಾಣವನ್ನು ಅಂದಾಜು ಮಾಡಲು ಸಹಾಯಕವಾಗುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ಕಾರ್ಯಪಡೆ (Task Force) ರಚಿಸಬೇಕು.

2. ಸ್ಥಳೀಯ ಜೈವಿಕ ನಿಯಂತ್ರಣ ಪ್ರಯೋಗಾಲಯಗಳ ಬಲವರ್ಧನೆ: ‘ಗೋನಿಯೋಜಸ್ ಪರತಂತ್ರ ಜೀವಿಗಳನ್ನು’ ಸ್ಥಳೀಯವಾಗಿ ಲ್ಯಾಬ್ಗಳಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಅಗತ್ಯ ಅನುದಾನ ಮತ್ತು ತಾಂತ್ರಿಕ ಬೆಂಬಲವನ್ನು ನೀಡಿ, ಪ್ರಯೋಗಾಲಯಗಳನ್ನು ಬಲಪಡಿಸಬೇಕು.

3. ರೈತರಿಗೆ ತಾಂತ್ರಿಕ ನೆರವು ಮತ್ತು ಅರಿವು: ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ನಿರಂತರವಾಗಿ ತಾಂತ್ರಿಕ ಮಾರ್ಗದರ್ಶನ, ಅರಿವು ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬೇಕು. ಸ್ಥಳೀಯವಾಗಿ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆಗಳ ಮೂಲಕ ತ್ವರಿತ ಸ್ಪಂದನಾ ತಂಡಗಳನ್ನು ರಚಿಸಬೇಕು.

4. ಸಬ್ಸಿಡಿ ದರದಲ್ಲಿ ನಿಯಂತ್ರಣ ವಸ್ತುಗಳ ಪೂರೈಕೆ: ರೈತರಿಗೆ ಬೇವು ಆಧಾರಿತ ಕೀಟನಾಶಕಗಳು, ಬೇವಿನ ಹಿಂಡಿ, NPK ಮತ್ತು ಲಘು ಪೋಷಕಾಂಶಗಳ ಮತ್ತು ಕೀಟ ಮತ್ತು ರೋಗ ನಿರೋಧಕತೆ ಹೆಚ್ಚಿಸಲು ಸೂಕ್ಷ್ಮ ಜೀವಾಣುಗಳ ಸಮಿಶ್ರಣ (ಜೈವಿಕ ಗೊಬ್ಬರ)ವನ್ನು ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು.

5. ಸಂಶೋಧನೆ, ಪ್ರಾತ್ಯಕ್ಷತೆ ಮತ್ತು ಅಭಿವೃದ್ಧಿಗೆ ಒತ್ತು: ಈ ಹುಳುವಿನ ಬಗ್ಗೆ ಮತ್ತಷ್ಟು ಆಳವಾದ ಸಂಶೋಧನೆ ನಡೆಸಿ, ಹೊಸ ಮತ್ತು ಪರಿಣಾಮಕಾರಿ ನಿಯಂತ್ರಣ ಕಂಡು ಹಿಡಿದು ರೈತರ ತೋಟಗಳಲ್ಲಿ ಯಶ್ವಸಿಯಾಗಿ ಪ್ರಾತ್ಯಕ್ಷತೆ ಮಾಡಲು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ವಿಶೇಷ ಅನುದಾನವನ್ನು ನೀಡಬೇಕು.

ಸದ್ಯ ಮಂಡ್ಯ ಸೇರಿದಂತೆ ಮೇಲೆ ಉಲ್ಲೇಖಿಸಲಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಈ ಬಾಧೆಗಳು ಕಾಡುತ್ತಿದ್ದು, ಇದಕ್ಕೆ ತ್ವರಿತ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಹರಡಿ ತೆಂಗು ಬೆಳೆಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ದಯವಿಟ್ಟು ಈ ವಿಷಯದಲ್ಲಿ ತಾವು ತಕ್ಷಣವೇ ಮಧ್ಯ ಪ್ರವೇಶಿಸಿ, ತೆಂಗು ಬೆಳೆಗಾರರ ಹಿತ ಕಾಯಬೇಕೆಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಮನವಿ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments