Saturday, November 23, 2024
Google search engine
Homeಬೆಂಗಳೂರುಇಂದಿರಾಗಾಂಧಿ ರಾಷ್ಟ್ರೀಕರಣ ಮಾಡಿದ್ದರಿಂದ ಬಡವರಿಗೂ ಬಾಗಿಲು ತೆರೆದ ಬ್ಯಾಂಕುಗಳು: ಸಿಎಂ ಸಿದ್ದರಾಮಯ್ಯ

ಇಂದಿರಾಗಾಂಧಿ ರಾಷ್ಟ್ರೀಕರಣ ಮಾಡಿದ್ದರಿಂದ ಬಡವರಿಗೂ ಬಾಗಿಲು ತೆರೆದ ಬ್ಯಾಂಕುಗಳು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮೊದಲು ಬಡವರು ಬ್ಯಾಂಕುಗಳ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ ನಂತರ ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಹಯೋಗದಲ್ಲಿ ಮಂಗಳವಾರ ನಡೆದ  ಮಾಜಿ ಪ್ರಧಾನಿ ಇಂದಿರಾ ಗಾಂದಿಯವರ  ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.

ಇಂದಿರಾ ಗಾಂಧಿಯವರು ಬಡವರ ಪರವಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ.  ಭೂ ಸುಧಾರಣಾ  ಕಾಯ್ದೆ, ಗರೀಬಿ ಹಟಾವೋ  ಕಾರ್ಯಕ್ರಮ, ಬ್ಯಾಂಕುಗಳ ರಾಷ್ಟ್ರೀಕರಣ  ಮುಂತಾದವುಗಳ ಫಲ ಬಡವರಿಗೆ ದೊರಕಬೇಕು. ಬಡವರು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿಯನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ ಅವರಿಗೆ ಇತ್ತು. ಕಾಂಗ್ರೆಸ್ ಪಕ್ಷ ಮಾತ್ರ  ಸಮಾಜದಲ್ಲಿ ಸಾಮಾಜಿಕ ನ್ಯಾಯ , ಜಾತ್ಯಾತೀತ ತತ್ವ, ಸಂವಿಧಾನ, ಪ್ರಜಾಪ್ರಭುತ್ವಗಳಲ್ಲಿ ಅಪಾರವಾದ ನಂಬಿಕೆ ಇಟ್ಟು ಅದರಂತೆ  ನಡೆಯುವ ಪಕ್ಷ ಎಂದು ಅವರು ಹೇಳಿದರು.

ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿರುವ ಪಕ್ಷ. ಬಡವರ ಪರವಾಗಿ, ಸಾಮಾಜಿಕ ನ್ಯಾಯದ ಪರವಾಗಿ ಇರಲು ಸಾಧ್ಯವೇ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ಸಂವಿಧಾನ ಬದಲಾಗಬೇಕೆಂದು ಬಯಸುವ ಪಕ್ಷ. ಅವರಿಗೆ ಪ್ರಜಾಪ್ರಭುತ್ವದಲ್ಲಿ  ನಂಬಿಕೆ ಇಲ್ಲ. ನಮಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿದ್ದರೆ, ಬಿಜೆಪಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ವಿವರಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಅಧಿಕಾರ ಕೇಂದ್ರೀಕೃತಗೊಳ್ಳುತ್ತಿದೆ. ನೆಹರೂ,  ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇಲ್ಲದೇ ಹೋಗಿದ್ದರೆ ಈ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಲು ಸಾಧ್ಯವಾಗುತ್ತಿರಲಿಲ್ಲ.  ರಾಜೀವ್ ಗಾಂಧಿಯವರು ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ತಿದ್ದು ಪಡಿ ತಂದು ಅಧಿಕಾರ ವಿಕೇಂದ್ರೀಕರಣದ ಮೂಲಕ ಪಟ್ಟಣ ಪಂಚಾಯತಿ, ನಗರಸಭೆಗಳಿಗೆ ಅಧಿಕಾರವನ್ನು ಮಹಿಳೆಯರಿಗೆ ನೀಡಿದರು. ಇದಾಗದೇ ಹೋಗಿದ್ದರೆ ಮಹಿಳೆಯರಿಗೆ ಶೇ. 55  ಮೀಸಲಾತಿ ದೊರೆಯುತ್ತಿರಲಿಲ್ಲ. ರಾಮಾ ಜೋಯಿಸ್ ಎಂಬ ಬಿಜೆಪಿ ಸಂಸದರು ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿದ್ದ ಇತಿಹಾಸವನ್ನು ನೆನಪಿಸಿ ಬಿಜೆಪಿ ಹೇಗೆ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ ಎನ್ನುವುದನ್ನು ವಿವರಿಸಿದರು.

ಗ್ಯಾರಂಟಿ ಯೋಜನೆಗಳು, ಹಲವಾರು ಭಾಗ್ಯ ಯೋಜನೆಗಳು, ಇಂದಿರಾ ಕ್ಯಾಂಟೀನು, ಎಸ್.ಸಿ.ಎಸ್ ಪಿ/ ಟಿಎಸ್ ಪಿ  ಕಾಯ್ದೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ.  ಈ ದೇಶದ ಬಜೆಟ್ 48 ಲಕ್ಷ ಕೋಟಿ. 60,000 ಕೋಟಿ ರೂ.ಗಳನ್ನು ಮಾತ್ರ ಎಸ್ ಸಿ.ಎಸ್ ಪಿ /ಟಿ.ಎಸ್.ಪಿ ಯೋಜನೆಯಡಿ ವೆಚ್ಚ ಮಾಡುತ್ತಿದ್ದಾರೆ.

ನಮ್ಮ ಸರ್ಕಾರ 3, 71,000 ಕೋಟಿ ಬಜೆಟ್ ನಲ್ಲಿ 39121 ಕೋಟಿ ರೂ.ಗಳನ್ನು ಪರಿಶಿಷ್ಟರಿಗೆ ಮೀಸಲಿಟ್ಟಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಡಿ 1. ಕೋಟಿ 22 ಲಕ್ಷ ಕುಟುಂಬಗಳಿಗೆ ತಿಂಗಳಿಗೆ 2000 ರೂ.ಗಳನ್ನು ಕೊಡಲಾಗುತ್ತಿದೆ. ನರೇಂದ್ರ ಮೋದಿಯವರು ಇದನ್ನು ವಿರೋಧಿಸಿದ್ದರು. 32,000 ಕೋಟಿ ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ. ಒಟ್ಟು ಗ್ಯಾರಂಟಿ ಯೋಜನೆಗಳಿ 56000 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವದ ಪರವಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವುದು, ಸಂವಿಧಾನದ ಬಗ್ಗೆ ಗೌರವ ಇಟ್ಟು ಅದರಂತೆ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.

ಬಿಜೆಪಿ ದೇಶ ಭಕ್ತಿ ಬಗ್ಗೆ ಉದ್ದನೆಯ ಭಾಷಣ ಮಾಡುತ್ತಾರೆ ಅಷ್ಟೇ. ದೇಶಭಕ್ತಿ ಉಳಿದಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದರು. ಇದರ ಆಧಾರದ ಮೇಲೆ ಈ ದೇಶವನ್ನು , ನಾಡನ್ನು ಕಟ್ಟಬೇಕಾಗುತ್ತದೆ. ಇಂದಿರಾ ಗಾಂಧಿಯವರನ್ನು ನೆನೆಸಿಕೊಂಡು ಅವರಿಂದ ಸ್ಪೂರ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.  ಮಹಿಳೆಯರಿಗೆ ಮೀಸಲಾತಿಯನ್ನು 2028 ರಲ್ಲಿ ಕೊಡುವುದಾಗಿ ಹೇಳುವ ನರೇಂದ್ರ ಮೋದಿಯವರು ಅದನ್ನು ಈಗಲೇ ಮಾಡಬಹುದಿತ್ತು. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಹಾಗೂ ಬದ್ಧತೆ ಅಗತ್ಯವಿದೆ. ಸಂಸತ್ತಿನಲ್ಲಿ  ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲು ನಮ್ಮ ತಕರಾರೇನಿಲ್ಲ, ನಾವೇ  ಇದನ್ನು ಜಾರಿಗೆ ತರಬೇಕು ಎಂದರು.

ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿಗಳಲ್ಲಿ 50% ಮೀಸಲಾತಿ ಇದೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಬೇಕು ಎಂದರು.  ಸಂಸತ್ತು, ವಿಧಾನ ಸಭೆಯಲ್ಲಿಯೂ ಮೀಸಲಾತಿ ನೀಡಲು ನಮ್ಮ ತಕರಾರು ಇಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments