ಯುವತಿಯ ಮೂಲಕ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಯತ್ನಿಸಿದ ಪ್ರಕರಣದಲ್ಲಿ ಪೊಲೀಸ್ ಪೇದೆಯನ್ನು ಹಾಸನದಲ್ಲಿ ಬಂಧಿಸಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಂಪಲಾಪುರ ಗ್ರಾಮದ ನಿವಾಸಿ ರಾಜಸ್ಥಾನ ಮೂಲದ ಉದ್ಯಮಿ ದಿನೇಶ್ ಕುಮಾರ್ ಅವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಯತ್ನಿಸಿದ್ದಕ್ಕಾಗಿ ಪ್ರಮುಖ ಆರೋಪಿ ಪೊಲೀಸ್ ಕಾನ್ ಸ್ಟೇಬಲ್ ಶಿವಣ್ಣ ಅವರನ್ನು ಬಂಧಿಸಿಸಲಾಗಿದ್ದು, ಇತರರಿಗಾಗಿ ಶೋಧ ಕಾರ್ಯ ನಡೆದಿದೆ.
ಘಟನೆ ಹಿನ್ನಲೆ:
ಪಿರಿಯಾಪಟ್ಟಣದ ಕಂಪಲಾಪುರದಲ್ಲಿ ಕಳೆದ 35 ವರ್ಷಗಳಿಂದ ವಾಸವಾಗಿರುವ ರಾಜಸ್ಥಾನ ಮೂಲದ ದಿನೇಶ್ ಕುಮಾರ್ ಪೂಜಾ ಫ್ಯಾಶನ್ಸ್ ಎಂಬ ಬಟ್ಟೆ ಅಂಗಡಿ ಇಟ್ಕೊಂಡಿದ್ದಾರೆ.
ಜೂನ್ 11ರ ಬುಧವಾರ ಸಂಜೆ 7.30 ರ ಸಮಯದಲ್ಲಿ ಅಂದಾಜು 23 ವರ್ಷದ ಯುವತಿ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿಸಿದ ಬಳಿಕ ಇನ್ನೂ ಬೇರೆ ಬೇರೆ ಡಿಸೈನ್ ಬಟ್ಟೆ ಬಂದಾಗ ಖರೀದಿಸುವುದಾಗಿ ಹೇಳಿ ದಿನೇಶ್ ಕುಮಾರ್ ನ ಮೊಬೈಲ್ ನಂಬರ್ ಪಡೆದು ತೆರಳಿದ್ದಾಳೆ.
ನಂತರ ದಿನೇಶ್ ಕುಮಾರ್ ಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಚಾಟಿಂಗ್ ಮಾಡುವುದನ್ನು ಪ್ರಾರಂಭಿಸಿದ ಯುವತಿ ದಿನೇಶ್ ಕುಮಾರ್ ನೊಂದಿಗೆ ಸತತವಾಗಿ ಚಾಟಿಂಗ್ ಮುಂದುವರೆಸಿದ್ದು ಇಬ್ಬರ ನಡುವೆ ಮೆಸೇಜುಗಳು ಮತ್ತು ಫೋಟೋಗಳು ವಿನಿಮಯವಾಗಿವೆ.
ಜೂನ್ 14 ಸಂಜೆ 4 ರ ಸಮಯದಲ್ಲಿ ಯುವತಿ ದಿನೇಶ್ ಕುಮಾರ್ ಗೆ ವಾಟ್ಸಾಪ್ ಮೂಲಕ ಕರೆ ಮಾಡಿ ತಾನು ಬೈಲುಕುಪ್ಪೆ ಸಮೀಪದ ಮರಡಿಯೂರು ಗ್ರಾಮದ ತನ್ನ ಆಂಟಿ ಮನೆಗೆ ಬಂದಿದ್ದೇನೆ ಆಂಟಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು ತಾನೊಬ್ಬಳೇ ಮನೆಯಲ್ಲಿ ಇರುವುದಾಗಿ ತಿಳಿಸಿ ಅಲ್ಲಿಗೆ ಬರುವಂತೆ ಆಹ್ವಾನಿಸಿದ್ದಾಳೆ.
ಯುವತಿ ಕಳಿಸಿದ ಲೋಕೇಶನ್ ಆದರಿಸಿ ದಿನೇಶ್ ಕುಮಾರ್ ತನ್ನ ಕಾರಿನಲ್ಲಿ ಸಂಜೆ 4.30 ಕ್ಕೆ ಮರಡಿಯೂರಿಗೆ ಬಂದಿದ್ದು ಆ ಸಮಯದಲ್ಲಿ ಮನೆಯಿಂದ ಹೊರಬಂದ ಯುವತಿ ದಿನೇಶ್ ಕುಮಾರ್ ನನ್ನು ಮನೆಯೊಳಗೆ ಕರೆದೋಯ್ದು ತುಂಬಾ ಸಲಿಗೆಯಿಂದ ವರ್ತಿಸಿ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದಾಳೆ.
ಇವರಿಬ್ಬರು ಸರಸದಲ್ಲಿದ್ದಾಗ ಸಂಜೆ 6 ರ ಸಮಯದಲ್ಲಿ ಮನೆಯೊಳಕ್ಕೆ ನುಗ್ಗಿದ ಆನಂದ್, ಸುನಿಲ್, ಜಗತ್ ಎಂಬುವವರು ದಿನೇಶ್ ಕುಮಾರ್ ಗೆ ಚೆನ್ನಾಗಿ ಥಳಿಸಿ ಯುವತಿಯೊಂದಿಗೆ ಆತನನ್ನು ಅರೆ ಬೆತ್ತಲೆಯಲ್ಲಿ ನಿಲ್ಲಿಸಿ ತಮ್ಮ ಮೊಬೈಲ್ ನಲ್ಲಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. 50 ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಗಳು ಹಣ ಕೊಡದಿದ್ದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುವುದಾಗಿ ಹೆದರಿಸಿದ್ದಾರೆ.
ಪೂರ್ವ ನಿಯೋಜನೆಯಂತೆ ಮಾಕನಹಳ್ಳಿ ಗ್ರಾಮದ ಮೂರ್ತಿ ಮತ್ತು ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶಿವಣ್ಣ ಎಂಬುವವರನ್ನು ಸ್ಥಳಕ್ಕೆ ಕರೆಸಿಕೊಂಡು ಸಂಧಾನ ಮಾಡುವ ನಾಟಕವಾಡಿದ್ದಾರೆ.
ಕಡೆಗೆ 10 ಲಕ್ಷ ರೂ ನೀಡುವಂತೆ ತೀರ್ಮಾನಿಸಿ ದಿನೇಶ್ ಕುಮಾರ್ ಮೊಬೈಲ್ ನಿಂದ ಆತನ ತಮ್ಮ ಮಹೇಂದ್ರ ನಿಗೆ ಕರೆ ಮಾಡಿಸಿ 10 ಲಕ್ಷ ರೂ ತಂದು ಪೊಲೀಸ್ ಕಾನ್ಸ್ಟೇಬಲ್ ಶಿವಣ್ಣ ಗೆ ತಲುಪಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸೂಚಿಸಿದ ದಿನೇಶ್ ಕುಮಾರ್ ನ ಸಹೋದರ ಮಹೇಂದ್ರ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪೊಲೀಸರು ದಿನೇಶ್ ಕುಮಾರ್ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸಿದ್ದು ದಿನೇಶ್ ಕುಮಾರ್ ನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಗಾಬರಿಗೊಂಡ ಆರೋಪಿಗಳು ದಿನೇಶ್ ಕುಮಾರ್ ನನ್ನು ಆತನ ಕಾರಿನಲ್ಲಿ ಬೈಲಕುಪ್ಪೆ ಟಿಬೆಟಿಯನ್ ಮೊದಲನೇ ಕ್ಯಾಂಪ್ ವರೆಗೆ ಕರೆತಂದು ರಾತ್ರಿ 1.30 ರ ಸಮಯದಲ್ಲಿ ರಸ್ತೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ದಿನೇಶ್ ಕುಮಾರ್ ತನ್ನ ಸಹೋದರ ಮಹೇಂದ್ರ ನೊಂದಿಗೆ ಬೈಲಕುಪ್ಪೆ ಪೊಲೀಸ್ ಠಾಣೆಗೆ ಕರೆದೋಯ್ದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಬೈಲುಕುಪ್ಪೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.


