ಅತ್ತೆಯನ್ನು 95 ಬಾರಿ ಇರಿದು ಕೊಂದ 24 ವರ್ಷದ ಸೊಸೆಗೆ ಮಧ್ಯಪ್ರದೇಶದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರೇವಾ ಜಿಲ್ಲೆಯ ಅಟ್ರಾಲಿಯಾ ಗ್ರಾಮದ ನಿವಾಸಿ ಕಾಂಚನ್ ಕೊಲ್ ಅತ್ತೆಯನ್ನು ಭೀಕರವಾಗಿ ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
ರೇವಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಪದ್ಮಾ ಜಾಟವ್ ತನ್ನ 50 ವರ್ಷದ ಅತ್ತೆ ಸರೋಜ್ ಕಾಲ್ ಅವರನ್ನು ಕೊಲೆಗೈದ ಪ್ರಕರಣದಲ್ಲಿ ಕಾಂಚನ್ ಕೊಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2022, ಜುಲೈ 12ರಂದು ಅತ್ತೆ ಮನೆಯಲ್ಲಿ ಒಬ್ಬಳೇ ಇದ್ದಿದ್ದನ್ನು ಗಮನಿಸಿ ಸೊಸೆ ಚಾಕುವಿನಿಂದ 95 ಬಾರಿ ಇರಿದಿದ್ದಳು. ಮನೆಗೆ ಮರಳಿದ ಮಗ ತೀವ್ರ ರಕ್ತಸ್ರಾವಗೊಂಡಿದ್ದ ತಾಯಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಂತರ ತಾಯಿಯ ಕೊಲೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
ಪ್ರಕರಣದಲ್ಲಿ ಸೊಸೆ ಜೊತೆಗೆ ಮಗನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ವೇಳೆ ಸ್ಥಳದಲ್ಲಿ ಇರಲಿಲ್ಲ ಎಂಬ ಒಂದೇ ಕಾರಣದಿಂದ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ.