ಮಂಡ್ಯದಲ್ಲಿ ಮಾಸಾಂತ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಆತಿಥ್ಯವೂ ನೀಡಬೇಕು ಎಂದು ಬಾಡೂಟ ಬಳಗ ಆಗ್ರಹಿಸಿ ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಬಾಡೂಟ ಬಳಗ, ಮಂಡ್ಯ ಜಿಲ್ಲೆ ಬಾಡೂಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಅತಿಥಿಗಳಿಗೆ ಬಾಡೂಟ ಹಾಕಿಯೇ ಸತ್ಕಾರ ಮಾಡುವುದು. ಆದರೆ ಮಾಂಸಾಹಾರಕ್ಕೆ ಯಾವುದೇ ಅವಕಾಶ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಭಾನುವಾರ ನಡೆದ ಸಂಘಟನೆಗಳ ಒಕ್ಕೂಟವಾದ ಬಾಡೂಟ ಬಳಗದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಸೋಮವಾರ ಜಿಲ್ಲಾಧಿಕಾರಿಗೆ ತಮ್ಮ ತೀರ್ಮಾನವನ್ನು ತಿಳಿಸಿತು. ಆದರೆ ಮಾಂಸಹಾರಕ್ಕೆ ಸಾಹಿತ್ಯ ಪರಿಷತ್ ನಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಡಿಸೆಂಬರ್ ೨೦ರಂದ ೨೨ರವರೆಗೆ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರದ ಜೊತೆ ಮಾಂಸಹಾರವೂ ಇರಲಿ. ಕೇವಲ ಸಸ್ಯಹಾರಿಗಳು ಮಾತ್ರ ಸಾಹಿತ್ಯ ಸಮ್ಮೇಳನಕ್ಕೆ ಬರುವುದಿಲ್ಲ. ಅತಿಥಿ ಸತ್ಕಾರ ಮಾಡುವಾಗ ಬಾಡೂಟದ ವ್ಯವಸ್ಥೆಯೂ ಆಗಬೇಕು ಎಂದು ಬಾಡೂಟ ಬಳಗ ಆಗ್ರಹಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಬಾಡೂಟ ವ್ಯವಸ್ಥೆ ಮಾಡದೇ ಇದ್ದರೆ ನಾವೇ ಮನೆ ಮನೆಯಿಂದ ಕೋಳಿ ಸಂಗ್ರಹಿಸಿ ಬಾಡೂಟದ ವ್ಯವಸ್ಥೆ ಮಾಡುತ್ತೇವೆ. ಕೋಸಂಬರಿ ಜೊತೆ ಎಗ್ ಬುರ್ಜಿಯೂ ಇರಲಿ. ಹಪ್ಪಳದ ಜೊತೆ ಕೊರಬಾಡು, ಕಬಾಬ್ ಕೊಡಿ, ಮುದ್ದೆಗೆ ಮೊಸ್ಸಪ್ಪ, ತರಕಾರಿ ಸಾರು ಜೊತೆ ಬೋಟಿ ಗೊಜ್ಜು ಇರಲಿ ಎಂದು ಬಾಡೂಟ ಬಳಗ ಆಗ್ರಹಿಸಿದೆ.