ಸರ್ಕಾರ ವಶಪಡಿಸಿಕೊಂಡ ಜಾಗಕ್ಕೆ ಪರಿಹಾರ ಸಿಗದೇ ಪರ್ಯಾಯ ಜಮೀನು ಸಿಗದೇ ಸರ್ಕಾರಿ ಕಚೇರಿಗಳ ಮುಂದೆ ದಶಕಗಳ ಕಾಲ ಅಲೆದಾಡಿದರೂ ಪ್ರಯೋಜನವಾಗದ ಕಾರಣ ಬೇಸತ್ತು ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಕೊನೆಯುಸಿರೆಳೆದಿದ್ದಾರೆ.
1970ರಲ್ಲಿ ಸರ್ಕಾರ ವಶಪಡಿಸಿಕೊಂಡ 2.5 ಎಕರೆ ಭೂಮಿ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪಾರ್ಕ್ ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಅಂಬುಲೆನ್ಸ್ ಮೂಲಕ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮಂಜೇಗೌಡ ಮೃತಪಟ್ಟಿದ್ದಾರೆ.
ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಪರ್ಯಾಯ ಜಾಗಕ್ಕಾಗಿ ಅವರು ಮನವಿ ಸಲ್ಲಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲಂಚ ಬೇಡಿಕೆಯಿಂದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಸೇರಿದ ಜಮೀನನ್ನು ಸರ್ಕಾರ ತೆಗೆದುಕೊಂಡು ಪರಿಹಾರ ಕೊಡಲಿಲ್ಲ. ಬದಲಿಗೆ ಗೋಮಾಳ ಜಾಗ ಬೇಕೆಂದಾಗ ಅರ್ಜಿ ಹಾಕಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಈ ಅನ್ಯಾಯದಿಂದ ಬೇಸತ್ತ ತಂದೆ ಪ್ರಾಣ ಕಳೆದುಕೊಂಡಿದ್ದಾರೆಂದು ಅವರ ಪುತ್ರ ಆರೋಪಿಸಿದ್ದಾರೆ.
1970ರ ದಶಕದಲ್ಲಿ ಮಂಜೇಗೌಡ ಅವರ ತಾತನಿಗೆ ಸೇರಿದ 2.5 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಪರಿಹಾರದ ಬದಲಾಗಿ ಗೋಮಾಳ ಜಾಗ ನೀಡಬೇಕೆಂದು ಮಂಜೇಗೌಡ ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಮಲ್ಲೇಹಳ್ಳಿ ಬಳಿ ಇರುವ 2.5 ಎಕರೆ ಗೋಮಾಳ ಜಾಗವನ್ನು 20 ವರ್ಷಗಳಿಂದ ಅಧಿಕೃತವಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಅಧಿಕಾರಿಗಳು ದಾಖಲೆ ಪರಿಶೀಲನೆ ಹಾಗೂ ಪ್ರಕ್ರಿಯೆ ಹೆಸರಿನಲ್ಲಿ ಓಡಾಡಿಸುವುದರ ಜೊತೆಗೆ ಲಂಚ ಕೇಳಿದ್ದರು. ಬ್ಯಾಂಕ್ ಸೇರಿದಂತೆ ಹಲವೆಡೆ 7-8 ಲಕ್ಷ ರೂಪಾಯಿ ಸಾಲ ಮಾಡಿದ್ದ ಮಂಜೇಗೌಡ, ಪರಿಹಾರವೂ ಸಿಗದೆ ಭೂಮಿಯೂ ಮಂಜೂರಾಗದೆ ಹತಾಶರಾಗಿದ್ದರು.
ಪರಿಹಾರ ನೀಡಿದ ದಾಖಲೆ ಬಿಡುಗಡೆ
ಸರ್ಕಾರದಿಂದ ಪರಿಹಾರ ಮಂಜೂರಾಗಿರುವ ದಾಖಲೆ ಬಹಿರಂಗಗೊಂಡಿದ್ದು, 1977ರಲ್ಲಿ ಸ್ವಾಧೀನವಾದ 1 ಎಕರೆ 13 ಗುಂಟೆ ಜಮೀನಿಗೆ ಭೂಸ್ವಾಧೀನ ಅಧಿಕಾರಿ ಪರಿಹಾರ ಮಂಜೂರು ಮಾಡಿದ್ದಕ್ಕೆ ಸಾಕ್ಷಿ ನೀಡಲಾಗಿದೆ. ಮೃತ ಮಂಜೇಗೌಡ ಆರೋಪದ ಬಗ್ಗೆ ದಾಖಲೆ ನೀಡಲಾಗಿದ್ದು, 1977ರಲ್ಲಿ ವಶಪಡಿಸಿಕೊಂಡ ಜಮೀನಿಗೆ 1,165 ರೂ. ಪರಿಹಾರವನ್ನು ಪಾಂಡವಪುರ ಭೂಸ್ವಾಧೀನ ಅಧಿಕಾರಿ ಮಂಜೂರು ಮಾಡಿದ್ದರು. ಮಂಜೇಗೌಡ ತಾತ ಬೋರೇಗೌಡಗೆ ಪರಿಹಾರ ನೀಡಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.


