ನವದೆಹಲಿ: ದೇಶಾದ್ಯಂತ ಕಚ್ಚಾ ತೈಲದ ಕೊರತೆಯಿಲ್ಲ ಮತ್ತು ಪೆಟ್ರೋಲ್ ಪಂಪ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಜನತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಬುಧವಾರ ನಡೆದ ಅಂತರ-ಸಚಿವಾಲಯದ ಸಭೆಯಲ್ಲಿ ಮಾತನಾಡಿದರು.
“ನಮ್ಮಲ್ಲಿ ಸಾಕಷ್ಟು ಕಚ್ಚಾ ತೈಲದ ದಾಸ್ತಾನು ಲಭ್ಯವಿದೆ, ಅಂದರೆ ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್‌ನಲ್ಲಿದೆ. ನಮ್ಮ ಸಂಸ್ಕರಣಾಗಾರಗಳು ಸಹ ಅತ್ಯುತ್ತಮ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ವಾರ್ಷಿಕ ಸಂಸ್ಕರಣಾ ಸಾಮರ್ಥ್ಯದ ಕಚ್ಚಾ ತೈಲವನ್ನು ಹೊಂದಿದ್ದೇವೆ ಎಂದು ದೇಶದ ನಾಗರಿಕರಿಗೆ ತಿಳಿಸಲು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಕಳೆದ ಎರಡು ದಿನಗಳಿಂದ, ಹಲವಾರು ಪ್ರದೇಶಗಳಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಪೆಟ್ರೋಲ್ ಪಂಪ್‌ಗಳ ಹೊರಗೆ ಸರತಿ ಸಾಲುಗಳನ್ನು ನಾವು ನೋಡಿದ್ದೇವೆ ಮತ್ತು ಪ್ಯಾನಿಕ್ ಖರೀದಿಯನ್ನು ಸಹ ಗಮನಿಸಲಾಗಿದೆ” ಎಂದು ಅವರು ವಿವರಿಸಿದರು.
“ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ ಯಾವುದೇ ಕೊರತೆಯಿಲ್ಲ ಎಂದು ನಾನು ನಾಗರಿಕರಿಗೆ ಭರವಸೆ ನೀಡಲು ಬಯಸುತ್ತೇನೆ. ಪೆಟ್ರೋಲ್ ಪಂಪ್‌ಗಳಿಗೆ ಇಂಧನ ಪೂರೈಸುವ ಟರ್ಮಿನಲ್‌ಗಳಲ್ಲಿಯೂ ಸಾಕಷ್ಟು ಲಭ್ಯತೆ ಇದೆ. ಆದ್ದರಿಂದ, ವದಂತಿಗಳನ್ನು ನಂಬಬೇಡಿ ಮತ್ತು ಪ್ಯಾನಿಕ್ ಖರೀದಿಯನ್ನು ತಪ್ಪಿಸಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ: ತೈಲ ಕಂಪನಿಗಳ ಸ್ಪಷ್ಟನೆ
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಕೊರತೆಯಿಲ್ಲ. ಸಂಗ್ರಹಾಗಾರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಧನ ದಾಸ್ತಾನಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಸ್ಪಷ್ಟಪಡಿಸಿವೆ.
ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗಿದೆ. ದರವೂ ಏರಲಿದೆ ಎಂಬ ವದಂತಿಯಿಂದಾಗಿ ಜನರು ಪೆಟ್ರೋಲ್ ಪಂಪ್‌ಗಳ ಮುಂದೆ ಜಮಾಯಿಸಿದ್ದಾರೆ. ಕೆಲವೆಡೆ, ಬಂಕ್ಗಳು ಬಂದ್ ಆಗಿವೆ ಎಂಬ ಬೋರ್ಡ್ಗಳನ್ನೂ ಹಾಕಲಾಗಿದೆ. ಇದರ ಬೆನ್ನಲ್ಲೇ, ತೈಲ ಕಂಪನಿಗಳು ಸ್ಪಷ್ಟನೆ ನೀಡಿವೆ.
ಇಂಧನ ಕೊರತೆ ವದಂತಿ ಸಂಪೂರ್ಣ ಆಧಾರರಹಿತ. ಸರಬರಾಜು ಸ್ಥಿರವಾಗಿದೆ. ಯಾವುದೇ ಅಡೆತಡೆಯಿಲ್ಲದೆ ರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ಪ್ರಸ್ತುತ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತೈಲ ಕಂಪನಿಗಳು ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
“ಎಲ್ಲಾ ನಾಗರಿಕರಿಗೆ ಪ್ರಮುಖ ಮಾಹಿತಿ. ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಗ್ಗೆ ವದಂತಿ ಹರಡಲಾಗಿದೆ. ಇದು ಸಂಪೂರ್ಣವಾಗಿ ಆಧಾರರಹಿತ. ದೇಶದಲ್ಲಿ ಇಂಧನದ ಕೊರತೆಯಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದೆ. ನಮ್ಮಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ಸಾಕಷ್ಟು ದಾಸ್ತಾನಿದೆ. ಸರಬರಾಜಿನಲ್ಲೂ ಯಾವುದೇ ಅಡೆತಡೆಯಿಲ್ಲ. ನಿರಂತರ ಇಂಧನ ಪೂರೈಕೆ ಇರುವ ಕಾರಣ ಜನರು ಭಯಭೀತರಾಗಬೇಡಿ ಅಥವಾ ಅನಗತ್ಯ ಖರೀದಿಯಲ್ಲಿ ತೊಡಗಿಸಿಕೊಳ್ಳಬೇಡಿ” ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಲಹೆ ನೀಡಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕೂಡ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, “ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಅಥವಾ ಕೊರತೆಯಿಲ್ಲ” ಎಂದು ಗ್ರಾಹಕರಿಗೆ ಭರವಸೆ ನೀಡಿದೆ.



