ಸೂಪರ್ ಹಿಟ್ ಕಾಂತಾರಾ ಚಾಪ್ಟರ್ -1 ಚಿತ್ರದ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ಮೂಲಕ ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕಾಂತಾರ ಚಾಪ್ಟರ್ -1 ಚಿತ್ರದ ನಟಿ ರುಕ್ಮಿಣಿ ವಸಂತ್ ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ 9445893273 ಸಂಖ್ಯೆಯನ್ನು ಬಳಸಿಕೊಂಡು, ನನ್ನಂತೆ ನಟಿಸಿ, ಸುಳ್ಳು ನೆಪದಲ್ಲಿ ವಿವಿಧ ಜನರನ್ನು ಸಂಪರ್ಕಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನಗೆ ಸೇರಿಲ್ಲ. ಈ ನಂಬರ್ನಿಂದ ಬರುವ ಯಾವುದೇ ಮೆಸೇಜ್ ಅಥವಾ ಕರೆಗಳು ಸಂಪೂರ್ಣ ಫೇಕ್ ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಕನೆಕ್ಟ್ ಆಗಬೇಡಿ. ಈ ಕೃತ್ಯವು ಸೈಬರ್ ಅಪರಾಧದ ಅಡಿ ಬರುತ್ತದೆ. ಅಂತಹ ವಂಚನೆ ಮತ್ತು ದಾರಿತಪ್ಪಿಸುವ ಕೆಲಸದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳಿವಳಿಕೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.
ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿ ವಿಭಾಗದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ಹಣ ಸುಲಿಗೆ ಮಾಡಲು ಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷೆಯ ಯೋಜನೆ ಕಾಂತಾರ ಚಾಪ್ಟರ್ 1 ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕನಕವತಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಈ ಚಿತ್ರ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದ್ದು, ಸುಮಾರು 900 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.
ರುಕ್ಮಿಣಿ ವಸಂತ್ ಯಶ್ ಜೊತೆ ಟಾಕ್ಸಿಕ್ ಮತ್ತು ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಜೋಡಿಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.


