ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಭಾರೀ ಕುತೂಹಲ ಮೂಡಿಸಿದ್ದ ಕಾಂತಾರ ಚಾಪ್ಟರ್-1 ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎರಡು ದಿನದಲ್ಲಿ ಭಾರತದಲ್ಲಿಯೇ 150 ಕೋಟಿ ಗಳಿಸಿ ಹೊಸ ದಾಖಲೆ ಬರೆದಿದೆ.
ಅಕ್ಟೋಬರ್ 2ರಂದು ಜಗತ್ತಿನಾದ್ಯಂತ ಏಕಏಕಾಲದಲ್ಲಿ ಬಿಡುಗಡೆ ಆದ ಕಾಂತಾರ ಚಿತ್ರ ಭಾರತದಲ್ಲಿ ಮೊದಲ ದಿನ 61 ಕೋಟಿ ರೂ. ಗಳಿಸಿತ್ತು. ಆದರೆ ಜಗತ್ತಿನಾದ್ಯಂತ ಒಟ್ಟಾರೆ 100 ಕೋಟಿ ರೂ. ಗಳಿಸಿತ್ತು.
ಅಕ್ಟೋಬರ್ 3ರಂದು ಅಂದರೆ ಬಿಡುಗಡೆ ಆದ ಎರಡನೇ ದಿನ ಗಳಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದೂ 46 ಕೋಟಿ ರೂ. ಸಂಪಾದಿಸಿ ಭಾರತದಲ್ಲಿಯೇ 100 ಕೋಟಿ ರೂ. ಬಾಚಿಕೊಂಡಿದೆ. ಶನಿವಾರ ಮಧ್ಯಾಹ್ನದ ವೇಳೆಗೆ 7 ಕೋಟಿ ರೂ. ಸಂಪಾದಿಸಿದ್ದು, 125 ಕೋಟಿ ದಾಟಿದೆ ಎಂದು ಹೇಳಲಾಗಿದೆ.
ಜಾಗತಿಕ ಮಟ್ಟದಲ್ಲಿ 2 ದಶಲಕ್ಷ ಡಾಲರ್ ಅಂದರೆ 80 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದ್ದು, ಚಿತ್ರ ಎರಡು ದಿನದಲ್ಲಿ 151 ಕೋಟಿ ರೂ. ಬಾಚಿಕೊಂಡು ಹೊಸ ದಾಖಲೆ ಬರೆದಿದೆ.
ಕಾಂತಾರಾ ಇದೀಗ ಸು ಫ್ರಮ್ ಸೋ, ಮಿರಾಯ್, ಸ್ಕೈ ಫೋರ್ಸ್ ಮುಂತಾದ ಚಿತ್ರಗಳ ದಾಖಲೆಯನ್ನು ಮುರಿದಿದೆ. ಸು ಫ್ರಮ್ ಸೋ 92 ಕೋಟಿ ರೂ. ಗಳಿಸಿದ್ದರೆ, ಮಿರಾಯ್ 100 ಕೋಟಿ ದಾಟಿತ್ತು.
ಶಾಲಾ-ಕಾಲೇಜುಗಳಿಗೆ ಸತತ ರಜೆ ಇರುವುದರಿಂದ ವಾರಾಂತ್ಯದಲ್ಲಿ ಚಿತ್ರ 200 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದ್ದು, ಈಗಾಗಲೇ ಚಿತ್ರ ಬಜೆಟ್ ಗಿಂತ ಅಧಿಕ ಮೊತ್ತ ಸಂಪಾದಿಸಿ ಸೂಪರ್ ಹಿಟ್ ಎನಿಸಿಕೊಂಡಿದೆ.
ಜಗತ್ತಿನಾದ್ಯಂತ ಒಟ್ಟಾರೆ 7000 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿರುವ ಕಾಂತಾರ ಚಿತ್ರ ಕರ್ನಾಟಕದಲ್ಲಿ 19.6 ಕೋಟಿ ರೂ. ಸಂಪಾದಿಸಿದ್ದು, ಶೇ.86ರಷ್ಟು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ತೆಲುಗಿನಲ್ಲಿ 16 ಕೋಟಿ, ತಮಿಳಿನಲ್ಲಿ 5.5 ಕೋಟಿ, ಹಿಂದಿಯಲ್ಲಿ 18.5 ಕೋಟಿ, ಮಲಯಾಳಂನಲ್ಲಿ 5.25 ಕೋಟಿ ರೂ. ಕಲೆ ಹಾಕಿದೆ.
ಕಾಂತಾರ ಮೊದಲ ಚಿತ್ರ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 400 ಕೋಟಿ ರೂ. ಬಾಚಿ ದಾಖಲೆ ಬರೆದಿತ್ತು. ಇದೀಗ 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂತಾರ ಚಾಪ್ಟರ್ 1- ಈ ದಾಖಲೆಯನ್ನು ಮುರಿಯವ ಸಾಧ್ಯತೆ ಇದೆ.
ಕಾಂತಾರ ಚಿತ್ರಕ್ಕೆ ಯಶ್ ಸೇರಿದಂತೆ ಸಿನಿ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಲುಗಿನಲ್ಲಿ ಸ್ಟಾರ್ ನಟರ ಚಿತ್ರವನ್ನು ಹಿಂದಿಕ್ಕಿ ದೊಡ್ಡ ಪ್ರಮಾಣದಲ್ಲಿ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಎರಡನೇ ದಿನದ ಜಾಗತಿಕ ಮಟ್ಟದ ಗಳಿಕೆಯ ವರದಿ ನಿರೀಕ್ಷಿಸಲಾಗಿದ್ದು, ಎರಡೇ ದಿನದಲ್ಲಿ 200 ಕೋಟಿ ರೂ. ದಾಟುವ ನಿರೀಕ್ಷೆ ಇದೆ.


