ಹಿರಿಯ ನಟಿ ಲೀಲಾವತಿ ಹಾಗೂ ಅಮ್ಮನ ಹೆಸರಿನಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲದ ಸೋಲದೇನಹಳ್ಳಿಯಲ್ಲಿ ಪುತ್ರ ವಿನೋದ್ ರಾಜ್ ನಿರ್ಮಿಸಿದ ದೇವಸ್ಥಾನವನ್ನು ಉದ್ಘಾಟಿಸಲಾಗಿದೆ.
ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ದೇಗುಲವನ್ನು ವಿನೋದ್ ರಾಜ್ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ’ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ಹೆಸರಿಟ್ಟಿದ್ದಾರೆ.
ಜನಪ್ರಿಯ ನಟಿಯಾಗಿದ್ದರೂ ಕಷ್ಟಗಳನ್ನು ಕಂಡಿದ್ದ ಲೀಲಾವತಿ ನಂತರ ಫಿನಿಕ್ಸ್ ನಂತೆ ಮೇಲೆದ್ದು ಬಂದು ನೆಲೆ ಕಂಡು ಕೊಂಡಿದ್ದೂ ಅಲ್ಲದೇ ಬಡವರಿಗೆ ನೆರವಾಗಿ ಮಾನವೀಯತೆ ತೋರಿದ್ದರು. ನೆಲಮಂಗದಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಹೆರಿಗೆ ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಆರಂಭಿಸಿ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.
ಡಾ.ಲೀಲಾವತಿ ದೇಗುಲವನ್ನು ಡಿಸೆಂಬರ್ 5ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಉದ್ಘಾಟಿಸಿದರು. ಹೋಮ, ಹವನ ಮೂಲಕ ಪೂಜೆ ನೆರವೇರಿಸಿ ದೇವಸ್ಥಾನ ಆರಂಭಿಸಲಾಗಿದೆ.
ಲೀಲಾವತಿ ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿ ದೇಗುಲಕ್ಕೆ ಸ್ಮಾರಕ ರೂಪ ನೀಡಿದ್ದಾರೆ.