ಹೊಟ್ಟೆಯೊಳಗಿರುವ ಮಗು ಯಾವುದು ಎಂದು ತಿಳಿಯಲು ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ 5 ಹೆಣ್ಣು ಮಕ್ಕಳ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶದ ಬಡೌನ್ಸ್ ಸಿವಿಲ್ ಲೈನ್ಸ್ ಬಡಾವಣೆಯಲ್ಲಿ ವಾಸವಾಗಿರುವ ಪನ್ನಾ ಲಾಲ್ ಎಂಬಾತ 2020 ಸೆಪ್ಟೆಂಬರ್ ನಲ್ಲಿ ಹುಟ್ಟಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಪತ್ನಿ ಅನಿತಾ ಮೇಲೆ ಹಲ್ಲೆ ಮಾಡಿದ್ದ.
ದಂಪತಿಗೆ ಮದುವೆ ಆಗಿ 22 ವರ್ಷ ಆಗಿದ್ದು ಐದು ಹೆಣ್ಣು ಮಗು ಜನಿಸಿದ್ದವು. ಹೆಣ್ಣು ಮಕ್ಕಳು ಜನಿಸಿದ್ದಕ್ಕೆ ಇಬ್ಬರ ನಡುವೆ ಪದೇಪದೆ ಜಗಳ ಆಗುತ್ತಿತ್ತು. ಅಲ್ಲದೇ ಪನ್ನಾ ಲಾಲ್ ತನಗೆ ಗಂಡು ಮಗು ಬೇಕು ಎಂದು ಪೀಡಿಸುತ್ತಿದ್ದ. ಗಂಡು ಮಗು ಹೆತ್ತುಕೊಡದಿದ್ದರೆ ಡಿವೋರ್ಸ್ ನೀಡಿ ಮತ್ತೊಂದು ಮದುವೆ ಆಗಿ ಗಂಡು ಮಗು ಪಡೆಯುವೆ ಎಂದು ಪತ್ನಿಯನ್ನು ಬೆದರಿಸುತ್ತಿದ್ದ.
ಪತ್ನಿ 8 ತಿಂಗಳು ಗರ್ಭಿಣಿ ಆಗಿದ್ದಾಗ ಈ ಬಾರಿ ಗಂಡು ಮಗುವೇ ಬೇಕು ಎಂದು ಪಟ್ಟು ಹಿಡಿದಿದ್ದ. ಈ ವಿಷಯದಲ್ಲಿ ಇಬ್ಬರ ನಡುವೆ ಜಗಳ ಆಗಿದ್ದು, ಗಂಡೋ ಹೆಣ್ಣೋ ಎಂದು ಈಗಲೇ ತಿಳಿಯಬೇಕು ಎಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಪತ್ನಿ ವಿರೋಧ ವ್ಯಕ್ತಪಡಿಸಿದಾಗ ಪನ್ನಾ ಲಾಲ್ ಚಾಕುವಿನಿಂದ ಹಲ್ಲೆ ಮಾಡಿದ್ದೂ ಅಲ್ಲದೇ ಹೊಟ್ಟೆಯನ್ನು ಸೀಳಿ ಮಗು ಯಾವುದು ಎಂದು ತಿಳಿಯಲು ಪ್ರಯತ್ನಿಸಿದ್ದ.
ಗಂಡನ ದಾಳಿಯಿಂದ ಬಿಡಿಸಿಕೊಂಡು ರಕ್ತಸ್ರಾವದ ನಡುವೆಯೇ ಪತ್ನಿ ಬೀದಿಗಳಲ್ಲಿ ಓಡಿದ್ದಳು. ಈ ವೇಳೆ ಸಮೀಪದಲ್ಲೇ ಅಂಗಡಿಯಲ್ಲಿದ್ದ ಸಹೋದರ ರಕ್ಷಣೆಗೆ ಬಂದಿದ್ದಾನೆ. ಪನ್ನಾ ಲಾಲ್ ಸ್ಥಳದಿಂದ ಕಾಲ್ಕಿತ್ತಿದ್ದ. ತಂಗಿಯನ್ನು ಸೋದರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದ.
ಉತ್ತರ ಪ್ರದೇಶದ ನ್ಯಾಯಾಲಯ ಸುದೀರ್ಘ ವಿಚಾರಣೆ ನಂತರ ಪನ್ನಾ ಲಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.