ನಿಖಿಲ್ ಕುಮಾರ್ ಸ್ವಾಮಿ ಅರ್ಜುನ ಆಗುತ್ತಾನೆ ಎಂದು ಭಾವಿಸಿದ್ದೆವು. ಆದರೆ ಜನರು ಮತ್ತೆ ಅವರನ್ನು ಅಭಿಮನ್ಯು ಪಾತ್ರವನ್ನೇ ಕೊಟ್ಟರು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಉಪ ಚುನವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತು ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಎರಡು ಬಾರಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಈ ಬಾರಿ ಗೆಲ್ಲುತ್ತಾರೆ ಎಂದು ಭಾವಿಸಿದ್ದೆವು. ಈ ಬಾರಿಯೂ ಸೋತಿದ್ದಾರೆ. ಅವರಿಗೆ ಅದೃಷ್ಟ ಇಲ್ಲ ಅಂತ ಕಾಣುತ್ತೆ. ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದಲ್ಲೇ ಸೋತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದೆ. ಅಲ್ಲದೇ ಸಿಎಂ, ಡಿಸಿಎಂ ಹಲವಾರು ದಿನಗಳ ಕಾಲ ಪ್ರಚಾರ ಮಾಡಿದ್ದಾರೆ. ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದರಿಂದ ಸೋಲಾಗಿದೆ ಎಂದು ಅಶೋಕ್ ಆರೋಪಿಸಿದರು.