500 ಸಿಗುತ್ತದೆ ಎಂಬ ಆಸೆಗೆ ಹಾವು ಹಿಡಿಯಲು ಹೋದ ಬಾಲಕ ನಾಗರ ಹಾವು ಕಡಿದು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಸಂಭವಿಸಿದೆ.
ಮುದ್ಲಾಪುರ ಗ್ರಾಮದ ನಿವಾಸಿ 17 ವರ್ಷದ ಅಬ್ದುಲ್ ರಜಾಕ್ ಹಾವು ಕಡಿತದಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಹಾವು ಕಡಿತದಿಂದ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ.
ಮನೆಗೆ ಬಂದಿದ್ದ ನಾಗರಹಾವನ್ನು ಅಬ್ದುಲ್ ರಜಾಕ್ ಹಿಡಿಯಲು ಯತ್ನಿಸಿದಾಗ ಕೈಗೆ ಹಾವು ಕಚ್ಚಿದೆ. ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಯಿಂದ ಆತ ಹಾವು ಹಿಡಿಯಲು ಹೋಗಿದ್ದ ಎನ್ನಲಾಗಿದೆ.
ಹಾವಿನ ಬಾಲವನ್ನು ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ. ಬಾಲಕನಿಗೆ ಹಾವು ಕಚ್ಚಿರುವ ವೀಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಹಾವು ಕಚ್ಚಿದ ಬಳಿಕ ಹುಡುಗ ಎರಡು ತಾಸು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಈ ಕುರಿತು ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


