ಕಾಸರಗೋಡು: ಆ್ಯಸಿಡ್ ಕುಡಿದು ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದ ಗಡಿಭಾಗ ಕಾಸರಗೋಡಿಲ್ಲಿ ನಡೆದಿದೆ.
ನಗರದ ಗೋಪಿ (58) ಅವರ ಪತ್ನಿ ಇಂದಿರಾ (55) ಮತ್ತು ಅಣ್ಣ ರಂಜೇಶ್ (37) ಹಾಗೂ ತಮ್ಮ ರಾಕೇಶ್ ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.
ಆ್ಯಸಿಡ್ ಕುಡಿದ ಬೆನ್ನಲ್ಲೇ ಮೂವರು ಮೃತಪಟ್ಟರೆ, ಗಂಭೀರ ಸ್ಥಿತಿಯಲ್ಲಿದ್ದ ರಾಕೇಶ್, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಕಳೆದ ಗುರುವಾರ ಕುಟುಂಬ ಸದಸ್ಯರು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಸ್ಥಳೀಯರು ಹೇಳುವಂತೆ ಆತ್ಮಹತ್ಯೆಗೆ ಹಣಕಾಸಿನ ತೊಂದರೆಯೇ ಕಾರಣ. ಈ ಘಟನೆ ನಡೆದ ದಿನ ಬೆಳಗ್ಗೆ ಗೋಪಿ ತನ್ನ ನೆರೆಯವರಿಗೆ ಕರೆ ಮಾಡಿ ತಾನು ಆ್ಯಸಿಡ್ ಸೇವಿಸಿರುವುದಾಗಿ ತಿಳಿಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ಕೂಡಲೇ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ದರು,ಆದರೆ ಅವರನ್ನು ಉಳಿಸುವ ಪ್ರಯತ್ನ ವಿಫಲವಾಗಿದೆ.ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


