ಬೆಳಗಾವಿ: ದತ್ತ ಜಯಂತಿ ಉತ್ಸವದ ಅಂಗವಾಗಿ ಡಿ. 5, 2025ರಂದು ಏರ್ಪಡಿಸಲಾಗಿದ್ದ ಮಹಾಪ್ರಸಾದ ಸೇವಿಸಿದ ನಂತರ ಸುಮಾರು 200ಕ್ಕೂ ಅಧಿಕ ಭಕ್ತಾದಿಗಳು ಸಂಶಯಿತ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಘಟನೆ ನಡೆದ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಸಾಂಬರೆ ಗ್ರಾಮದ ಮಾಜಿ ಶಾಸಕರಾದ ರಾಜೇಶ ಪಾಟೀಲ ಅವರು ಕೂಡಲೇ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರನ್ನು ಸಂಪರ್ಕಿಸಿ, ತುರ್ತು ವೈದ್ಯಕೀಯ ತಂಡ ಮತ್ತು ಅಗತ್ಯ ಔಷಧೋಪಚಾರ ಒದಗಿಸುವಂತೆ ಮನವಿ ಮಾಡಿಕೊಂಡರು.
ವಿಷಯ ತಿಳಿದ ತಕ್ಷಣ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾನವೀಯ ನೆಲೆಯಲ್ಲಿ ತ್ವರಿತವಾಗಿ ಸ್ಪಂದಿಸಿ, ವೈದ್ಯಕೀಯ ನೆರವು ನೀಡಲು ಆದೇಶ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಮತ್ತು ಡಾ. ಮಾಧವ ಪ್ರಭು ಅವರ ಮುಂದಾಳತ್ವದಲ್ಲಿ ಒಂದು ವಿಶೇಷ ವೈದ್ಯಕೀಯ ತಂಡವನ್ನು ಸಂಘಟಿಸಿದರು. ಆಸ್ಪತ್ರೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತೀವ್ರ ನಿಗಾ ಘಟಕ (ICU) ಮತ್ತು ಹಾಸಿಗೆಗಳನ್ನು ಸಹ ಮೀಸಲಿಡುವ ಮೂಲಕ ಸನ್ನದ್ಧತೆಯನ್ನು ಹೆಚ್ಚಿಸಲಾಯಿತು.
20 ವೈದ್ಯರು ಸಾಂಬರೆ ಗ್ರಾಮದಲ್ಲಿ ವಾಸ್ತವ್ಯ
ಮಾನವ ಜೀವ ಉಳಿಸುವ ಉದ್ದೇಶದಿಂದ, ಕೇವಲ ಒಂದೇ ಗಂಟೆಯ ಅವಧಿಯಲ್ಲಿ, 20 ವೈದ್ಯರು, 10 ನರ್ಸಿಂಗ್ ಸಿಬ್ಬಂದಿ, 5 ಆಂಬ್ಯುಲೆನ್ಸ್‌ಗಳು ಹಾಗೂ ಅಗತ್ಯ ಔಷಧಗಳೊಂದಿಗೆ ವೈದ್ಯಕೀಯ ತಂಡವು ಘಟನಾ ಸ್ಥಳಕ್ಕೆ ತಲುಪಿತು. ಗ್ರಾಮದಲ್ಲೇ ವಾಸ್ತವ್ಯ ಹೂಡಿದ ಈ ತಂಡವು ಅಸ್ವಸ್ಥಗೊಂಡ ಭಕ್ತಾದಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿ, ಅವರ ಶೀಘ್ರ ಗುಣಮುಖಕ್ಕಾಗಿ ಶ್ರಮಿಸಿತು.
ಸಕಾಲದಲ್ಲಿ ದೊರೆತ ಈ ಚಿಕಿತ್ಸೆಯಿಂದಾಗಿ ಯಾವುದೇ ದೊಡ್ಡ ಅನಾಹುತವಾಗದಂತೆ ತಡೆಯಲು ಸಾಧ್ಯವಾಯಿತು. ಮಾನವೀಯ ಸಂಕಷ್ಟದ ಈ ಸಮಯದಲ್ಲಿ ತ್ವರಿತವಾಗಿ ಸ್ಪಂದಿಸಿ ಭಕ್ತಾದಿಗಳ ಜೀವ ರಕ್ಷಣೆಗೆ ಶ್ರಮಿಸಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಅವರಿಗೆ ಶಾಸಕರಾದ ಶಿವಾಜಿ ಪಾಟೀಲ, ಮಾಜಿ ಶಾಸಕ ರಾಜೇಶ ಪಾಟೀಲ ಹಾಗೂ ಗ್ರಾಮಸ್ಥರು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


