ಬೆಂಗಳೂರು: ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಂಡ ಬೆನ್ನಲ್ಲೇ ಮೇಕೆದಾಟು ಯೋಜನೆಯ ಅನುಷ್ಠಾನ ಕುರಿತು ಸಿದ್ಧತೆ ಆರಂಭಿಸಲು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮೇಕೆದಾಟು ಯೋಜನೆ ವಿಚಾರದಲ್ಲಿ ಪಾದಯಾತ್ರೆ, ರಾಜಕೀಯ ಹೋರಾಟ ಹಾಗೂ ಕಾನೂನಾತ್ಮಕ ಹೋರಾಟ ಮಾಡಲಾಗಿದೆ. ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಆ ಮೂಲಕ ಮೇಕೆದಾಟು ಯೋಜನೆಗೆ ಮುಂದಿನ ಹೆಜ್ಜೆ ಇಡಲು ಹಸಿರು ನಿಶಾನೆ ತೋರಿದ್ದಕ್ಕೆ ಸಭೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಯೋಜನೆಯ ಅನುಷ್ಠಾನ ಸಂಬಂಧ ಮುಂದಿನ ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಬೆಳಗಾವಿ ಅಧಿವೇಶನ
ಬೆಳಗಾವಿಯಲ್ಲಿ ಡಿ.8ರಿಂದ ಡಿ.19ರವರೆಗೆ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ದಿನಾಂಕ ನಿಗದಿ ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿತ್ತು.
ಮೂರು ಸಚಿವ ಸಂಪುಟ ಉಪಸಮಿತಿಗಳು 6 ತಿಂಗಳು ಮೀರಿದರೂ ವರದಿಯನ್ನು ಸಲ್ಲಿಸದಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವರದಿ ಸಲ್ಲಿಸಲು ವಿಳಂಬವಾಗುತ್ತಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ವರದಿ ಶೀಘ್ರವಾಗಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಕೋವಿಡ್ ಖರೀದಿ ಅಕ್ರಮ ಸಂಬಂಧ ನ್ಯಾ.ಮೈಕೆಲ್ ಕುನ್ಹಾ ಅವರ ಆಯೋಗ ವರದಿ ಮೇಲಿನ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ, ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಚಿವ ಜಿ.ಪರಮೇಶ್ವರ್ ನೇತೃತ್ವದ ಸಂಪುಟ ಉಪಸಮಿತಿ ಹಾಗೂ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಉಪಸಮಿತಿ ವರದಿ ನೀಡಲು ವಿಳಂಬ ಮಾಡಿದೆ ಎಂದು ಸಚಿವರು ವಿವರಿಸಿದರು.


