Sunday, December 7, 2025
Google search engine
Homeರಾಜ್ಯಹಿಂದುಳಿದವರು, ದಲಿತರು ಬಿಜೆಪಿ, RSS ಸೇರುತ್ತಿದ್ದರೆ ಏನು ಹೇಳೋದು: ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರು ಬಿಜೆಪಿ, RSS ಸೇರುತ್ತಿದ್ದರೆ ಏನು ಹೇಳೋದು: ಸಿದ್ದರಾಮಯ್ಯ ಬೇಸರ

ಬೆಂಗಳೂರು: BJP-RSS ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಹಿಂದುಳಿದವರು-ದಲಿತರು ಸೇರ್ತಾರಲ್ಲಾ ಇವರಿಗೆ ಏನು ಹೇಳೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಪಾರ ಬೇಸರ ವ್ಯಕ್ತಪಡಿಸಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ, “ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ” ಉದ್ಘಾಟಿಸಿ ಮಾತನಾಡಿದರು.

ದೇವರು, ಧರ್ಮದ ಹೆಸರಲ್ಲಿ ಸಾಯ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ BJP-RSS ಸೇರಿ ಇವರೇ ಮೂಲ RSS ನವರಿಗಿಂತ, ಇವರೇ ಹೆಡ್ಗೇವಾರ್ ರೀತಿ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು.

ಹಾವನೂರು ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ ಎನ್ನುವುದನ್ನು ವಿವರಿಸಿದರು.

ಸಾಮಾನ್ಯ ಹಳ್ಳಿಯ ಪರಿಶಿಷ್ಟ ಕುಟುಂಬದಲ್ಲಿ ಹುಟ್ಟಿದ ಹಾವನೂರು ಅವರು ವಿದ್ಯಾರ್ಥಿ ದೆಸೆಯಲ್ಲೇ ಪ್ರತಿಭಟನೆ ಮಾಡುವ ಗುಣ ಹೊಂದಿದ್ದರು. ಹಾವನೂರು ಅವತು ಈ ಜಾತಿಯ ಮೊದಲ ವಕೀಲರಾಗಿದ್ದರು ಎಂದು ಸ್ಮರಿಸಿದರು.

ನಾನು ಹಣಕಾಸು ಮಂತ್ರಿಯಾದಾಗ, “ಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾ” ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ. 16 ಬಜೆಟ್ ಮಂಡಿಸಿದೆ. 17ನೇ ಬಜೆಟನ್ನೂ ಮಂಡಿಸುತ್ತೇನೆ. ನನಗೆ ಅವಕಾಶ ಸಿಕ್ಕಿದ್ದರಿಂದ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಅವಕಾಶ ಸಿಗದಿದ್ದರೆ ನನ್ನಿಂದ ಇದನ್ನು ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ ಎಂದರು.

ಬೇಡರ ಜಾತಿಯಲ್ಲಿ ಜನಿಸಿದ ಹಾವನೂರು ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ ಎಂದರು.

ನಾನು 1991 ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೆ. ಆಗ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದೆ. ನನ್ನ ಅರ್ಜಿ ಪರವಾಗಿ ಹಾವನೂರು ಅವರು ವಾದಿಸಿದ್ದರು. ಆ ಸಂದರ್ಭದಲ್ಲಿ ನಾನು ಹಾವನೂರು ಅವರ ಜೊತೆ ಆತ್ಮೀಯತೆ ಬೆಳೆದಿತ್ತು ಎಂದು ಸ್ಮರಿಸಿದರು.

ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಾಗಿತ್ತು. ನಮ್ಮಲ್ಲಿ ಧಿಕ್ಷಣ ಪ್ರಮಾಣ ಶೇ68 ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಅನುಕೂಲ ಮಾಡಿಕೊಂಡವರು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದ್ದರೆ. ಹಿಂದುಳಿದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲು ಜಾತಿಯ ಬಡವರನ್ನೂ ಬಹುವಚನದಿಂದ ಕರೆಯುವುದು, ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ ಎಂದರು.

ವಿದ್ಯಾವಂತರು ವಿದ್ಯೆ ಪಡೆದಷ್ಟೂ ಮೌಡ್ಯವನ್ನು ಹೆಚ್ಚೆಚ್ಚು ನಂಬುತ್ತಾರೆ. ಬಡತನಕ್ಕೆ ಹಣೆಬರಹ ಕಾರಣ ಎಂದು ನಂಬುವವರು ಇನ್ನೂ ಇದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾವಂತರೂ ಮೌಡ್ಯವನ್ನು ನಂಬುತ್ತಾರೆ ಎಂದರು.

ಬುದ್ದ, ಬಸವಣ್ಣ, ಅಂಬೇಡ್ಕರ್ ಅವರೆಲ್ಲಾ ಬಂದು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಇವರು ಹೋರಾಡಿದಾಗ ಜಾತಿ ವ್ಯವಸ್ಥೆ ಸಡಿಲ ಆದಂತೆ ಕಾಣುತ್ತದೆ. ಆದರೆ ಬಳಿಕ ಮತ್ತೆ ಗಟ್ಟಿಯಾಗುತ್ತದೆ. ಜಾತಿ ವ್ಯವಸ್ಥೆ ಮಾತ್ರ ಹೋಗುತ್ತಿಲ್ಲ ಎಂದರು‌.

ಅದಕ್ಕೇ ಆರ್ಥಿಕ, ಸಾಮಜಿಕ ಅಸಮಾನತೆಗೆ ತುತ್ತಾಗಿರುವ ಜನರೇ ಸ್ವಾತಂತ್ರ್ಯ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದನ್ನು ನಾವು ಮರೆಯಬಾರದು ಎಂದರು.

ಮೀಸಲಾತಿ ಮಿತಿ ಶೇ75ಕ್ಕೆ ಹೆಚ್ಚಿಸಲೂ ಸಿದ್ಧ

ನಮ್ಮ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧವಿದೆ. ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ.

ನನಗೆ ಕೊನೆಯ ಉಸಿರು ಇರುವವರೆಗೂ, ನಾನು ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಮತ್ತೆ ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments