ಪುಷ್ಪ-೨ ಚಿತ್ರದ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.
ಎರಡು ವಾರಗಳ ಹಿಂದೆ ಬಿಡುಗಡೆ ಆದ ಪುಷ್ಪ-೨ ಚಿತ್ರದ ಪ್ರದರ್ಶನ ವೇಳೆ ಸಂಧ್ಯಾ ಥಿಯೇಟರ್ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದು, ಆಕೆಯ ಪುತ್ರ ಅಸ್ವಸ್ಥಗೊಂಡಿದ್ದ.
ಕಾಲ್ತುಳಿತ ಪ್ರಕರಣಕ್ಕೆ ನಟ ಅಲ್ಲು ಅರ್ಜುನ್ ಅವರೇ ಕಾರಣರಾಗಿದ್ದು, ಪೊಲೀಸರಿಗೆ ಚಿತ್ರ ತಂಡವಾಗಲಿ, ಥಿಯೇಟರ್ ಮಾಲೀಕರಾಗಲಿ ಮಾಹಿತಿ ನೀಡದೇ ಇರುವುದು ಹಾಗೂ ಜನದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವ ಕಾರಣಕ್ಕೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶುಕ್ರವಾರ ಬೆಳಿಗ್ಗೆ ಚಿಕ್ಕಡಪಳ್ಳಿ ಪೊಲೀಸ್ ಠಾಣೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಿಚಾರಣೆ ನಡೆಸಲು ಕರೆದೊಯ್ದಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸ್ಪಂದಿಸಿದ್ದ ಅಲ್ಲು ಅರ್ಜುನ್ ಮೃತರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದರು. ಅಲ್ಲದೇ ಮಗನ ಉಸ್ತುವಾರಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.