Sunday, December 7, 2025
Google search engine
Homeಕಾನೂನುಗ್ರೇಟರ್ ಬೆಂಗಳೂರು ಕ್ಷೇತ್ರ ಪುನರ್ ವಿಂಗಡಣೆಗೆ ಸುಪ್ರೀಂ 15 ದಿನ ಗಡುವು

ಗ್ರೇಟರ್ ಬೆಂಗಳೂರು ಕ್ಷೇತ್ರ ಪುನರ್ ವಿಂಗಡಣೆಗೆ ಸುಪ್ರೀಂ 15 ದಿನ ಗಡುವು

ನವದೆಹಲಿ: ನೂತನವಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಎಲ್ಲಾ ಐದು ಪಾಲಿಕೆಗಳ ಕ್ಷೇತ್ರ ಪುನರ್ ವಿಂಗಡಣೆಗೆ ಅಂತಿಮ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ  ಸುಪ್ರೀಂಕೋರ್ಟ್ 15 ದಿನಗಳ ಕಾಲಾವಕಾಶ ನೀಡಿದೆ.

ಜಿಬಿಎ ಚುನಾವಣೆ ಸಂಬಂಧ ಕಾಂಗ್ರೆಸ್ ಮುಖಂಡ ಎಂ.ಶಿವರಾಜು ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್, ಉಜ್ಜಲ್ ಭುಯಾನ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರ ನೇತೃತ್ವದ ತ್ರಿಸದಸ್ಯ ಪೀಠ ಸಮಯವಕಾಶ ನೀಡಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಅಧಿಕಾರಿಗಳನ್ನು ನೇಮಿಸಿದ್ದರಿಂದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಅಧಿಸೂಚನೆ ಪ್ರಕಟಿಸಲಾಗಿಲ್ಲ, ಈಗ ಎಲ್ಲಾ ಸಿದ್ಧತೆಗಳಾಗಿದ್ದು, ಇನ್ನು ನ.15ರೊಳಗೆ ಕ್ಷೇತ್ರ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆ ಮತ್ತು ಆನಂತರ ಡಿ.15ರ ಒಳಗೆ ವಾರ್ಡ್ ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಅವರು ಆಯೋಗವು ಚುನಾವಣಾ ಪ್ರಕ್ರಿಯೆ ಆರಂಭಿಸಿದ್ದು, ಜಿಲ್ಲಾ ಮತ್ತು ಹೆಚ್ಚುವರಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದಾಗ್ಯೂ, ಚುನಾವಣೆ ನಡೆಸಲು ಆಯೋಗಕ್ಕೆ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ ಎಂದು ವಾದಿಸಿದರು.

ಅರ್ಜಿದಾರರ ಪರ ವಕೀಲರು ಬಿಬಿಎಂಪಿಗೆ ಚುನಾವಣೆ ನಡೆದು ಹಲವು ವರ್ಷಗಳಾಗಿವೆ. ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿಚಾರಣೆ ಬಳಿಕ ಪೀಠವು ಕ್ಷೇತ್ರ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಲು ನ.15ರವರೆಗೆ ಮತ್ತು ವಾರ್ಡ್ ಮೀಸಲಾತಿ ಪ್ರಕಟಿಸಲು ಡಿ.15ರವರೆಗೆ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ಕಲ್ಪಿಸಿ, ವಿಚಾರಣೆ ಮುಂದೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments