ನಾಯಕ ಸಂಜು ಸ್ಯಾಮ್ಸನ್ ಮತ್ತು ಧ್ರುವ ಜುರೆಲ್ ಜೊತೆಯಾಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್ ಗೆ 196 ರನ್ ಗೆ ನಿಯಂತ್ರಿಸಿದ ರಾಜಸ್ಥಾನ್ ರಾಯಲ್ಸ್ 1 ಓವರ್ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಲ್ಲಿ 8 ಜಯ ಹಾಗೂ 1 ಸೋಲಿನೊಂಧಿಗೆ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದು, ಬಹುತೇಕ ಪ್ಲೇಆಫ್ ಗೆ ಪ್ರವೇಶಿಸಿದೆ. ಲಕ್ನೋ ಸೂಪರ್ ಜೈಂಟ್ಸ್ 10 ಅಂಕದೊಂದಿಗೆ 3ನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಮುರಿದ 4ನೇ ವಿಕೆಟ್ ಗೆ 121 ರನ್ ಜೊತೆಯಾಟ ನಿಭಾಯಿಸಿದರು. ಸ್ಯಾಮ್ಸನ್ 33 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ನೆರವಿನೊಂದಿಗೆ 71 ರನ್ ಬಾರಿಸಿ ಔಟಾಗದೇ ಉಳಿದರೆ, ಧ್ರುವ್ ಜುರೆಲ್ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 52 ರನ್ ಗಳಿಸಿದರು.