ಮಧ್ಯಾಹ್ನ ಅರೆಸ್ಟ್, ಸಂಜೆ ಜೈಲು, ರಾತ್ರಿ ಬಿಡುಗಡೆ… ಇದು ಯಾವುದೋ ಸಿನಿಮಾ ಕಥೆಯಲ್ಲ ಬದಲಾಗಿ ತೆಲುಗಿನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಶುಕ್ರವಾರ ದಿನಚರಿ.
ಹೌದು, ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂಧಿಸಿದ ಚಿಕ್ಕಡಪಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಧ್ಯಾಹ್ನ 3.30ರ ಸುಮಾರಿಗೆ ನಾಂಪಲ್ಲಿ ನ್ಯಾಯಾಲಯ ೧೪ ದಿನಗಳ ಕಾಲ ಅಂದರೆ ಡಿಸೆಂಬರ್ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿತು.
ಈ ನಾಟಕೀಯ ಬೆಳವಣಿಗೆ ಮಧ್ಯ ಕುಟುಂಬದವರು ತೆಲಂಗಾಣ ಹೈಕೋರ್ಟ್ ಗೆ ಮೊರೆ ಹೋಗಿದ್ದು, ಸೋಮವಾರದವರೆಗೂ ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಂಜೆ 5.30ರ ಸುಮಾರಿಗೆ ಮಧ್ಯಂತರ ಜಾಮೀನು ನೀಡಿದೆ. ಅಲ್ಲದೇ ವಿಚಾರಣೆಯನ್ನು ಜನವರಿ ೨೧ಕ್ಕೆ ಮುಂದೂಡಿದೆ.
ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಚಂಚಲಗೂಡ ಜೈಲು ಸೇರಬೇಕಿದ್ದ ಅಲ್ಲು ಅರ್ಜುನ್ ಕೊನೆಯ ಗಳಿಗೆಯಲ್ಲಿ ಜೈಲು ಪಾಲಾಗುವ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಹೈಕೋರ್ಟ್ ಜಾಮೀನು ಮಂಜೂರು ಮಾಡದೇ ಇದ್ದರೆ ಅಲ್ಲು ಅರ್ಜುನ್ ಕನಿಷ್ಠ ಮೂರು ರಾತ್ರಿಗಳನ್ನು ಜೈಲಿನಲ್ಲಿ ಕಳೆಯಬೇಕಾಗಿತ್ತು. ಏಕೆಂದರೆ ನಾಳೆ ಎರಡನೇ ಶನಿವಾರ ಹಾಗೂ ಭಾನುವಾರ ಇದ್ದು, ಕೋರ್ಟ್ ರಜೆ ಇರುತ್ತದೆ.
ಎರಡು ವಾರಗಳ ಹಿಂದೆ ಬಿಡುಗಡೆ ಆದ ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಸಂಧ್ಯಾ ಥಿಯೇಟರ್ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದು, ಆಕೆಯ ಪುತ್ರ ಅಸ್ವಸ್ಥಗೊಂಡಿದ್ದ.
ಕಾಲ್ತುಳಿತ ಪ್ರಕರಣಕ್ಕೆ ನಟ ಅಲ್ಲು ಅರ್ಜುನ್ ಅವರೇ ಕಾರಣರಾಗಿದ್ದು, ಪೊಲೀಸರಿಗೆ ಚಿತ್ರ ತಂಡವಾಗಲಿ, ಥಿಯೇಟರ್ ಮಾಲೀಕರಾಗಲಿ ಮಾಹಿತಿ ನೀಡದೇ ಇರುವುದು ಹಾಗೂ ಜನದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವ ಕಾರಣಕ್ಕೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಲ್ಲು ಅರ್ಜುನ್ ವಿರುದ್ಧದ ಪೊಲೀಸರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದು, ಆರೋಪ ಸಾಬೀತಾದರೆ ಕನಿಷ್ಠ 5ರಿಂದ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಅವರ ತಂದೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸ್ಪಂದಿಸಿದ್ದ ಅಲ್ಲು ಅರ್ಜುನ್ ಮೃತರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದರು. ಅಲ್ಲದೇ ಮಗನ ಉಸ್ತುವಾರಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.