ಕಾಂಗ್ರೆಸ್ ಮುಳುಗುವ ಹಡಗು ಆಗಿದ್ದು, ಆ ಪಕ್ಷದಲ್ಲಿದ್ದವರು ನಕರಾತ್ಮಕ ಚಿಂತನೆಯಲ್ಲಿದ್ದಾರೆ. ನನ್ನ ಪ್ರಕಾರ ಶೀಘ್ರದಲ್ಲೇ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.
ಬಿಹಾರ ವಿಧಾನಸಭೆಯ ಫಲಿತಾಂಶ ಹೊರಬಿದ್ದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವಿಜಯೋತ್ಸವದ ಭಾಷಣ ಮಾಡಿದ ಅವರು, ಬಿಜೆಪಿ ಜೊತೆ ಮೈತ್ರಿಪಕ್ಷಗಳ ಸಂಬಂಧದಿಂದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಜುಗರವಾಗಿದೆ ಎಂದರು.
ಕಾಂಗ್ರೆಸ್ ವೋಟ್ ಚೋರಿ ಎಂಬ ಆರೋಪದ ಮೂಲಕ ಚುನಾವಣಾ ಆಯೋಗದ ಮೇಲೆ ಸಾಕ್ಷಾಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಜಾತಿ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಬಿಹಾರದ ಮತದಾರರು ಉತ್ತಮ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಗೆ ದೇಶದ ಬಗ್ಗೆ ಸಕರಾತ್ಮಕ ಚಿಂತನೆ ಇಲ್ಲ. ಕಾಂಗ್ರೆಸ್ ಈಗ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಅದು ಮುಸ್ಲಿಮ್ ಲೀಗ್ ನಕ್ಸಲ್ ಕಾಂಗ್ರೆಸ್ ಆಗಿ ಬದಲಾಗಿದೆ. ಇದೀಗ ಮತ್ತೊಂದು ಹೊಸ ತಲೆ ಬಂದಿದ್ದು, ಅದು ಇನ್ನಷ್ಟು ಕೆಟ್ಟದಾಗಿ ಪಕ್ಷವನ್ನು ಮುನ್ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಹೊಸ ತಂಡದ ಬಗ್ಗೆ ಅಸಮಾಧಾನ ಹೆಚ್ಚಾಗಿದ್ದು, ಇಬ್ಭಾಗದ ಸೂಚನೆ ನೀಡುತ್ತಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷ ೨೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪ್ರಚಂಡ ಜಯಭೇರಿಯೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿದರೆ, ಕಾಂಗ್ರೆಸ್ ೫ ಮತ್ತು ಮಿತ್ರ ಪಕ್ಷ ಆರ್ ಜೆಡಿ ೨೫ ಸ್ಥಾನಕ್ಕೆ ಕುಸಿದಿದೆ.


