ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಿಆರ್ ಗವಾಯಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಈ ಹುದ್ದೆ ಅಲಂಕರಿಸಿದ ದೇಶದ ಎರಡನೇ ದಲಿತ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಧವಾರ ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಬಿಆರ್ ಗವಾಯಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಮಾಣ ವನಚ ಬೋಧಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಸಂಜೀವ್ ಖನ್ನಾ ಮಂಗಳವಾರ ನಿವೃತ್ತರಾಗಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಜಸ್ಟೀಸ್ ಭೂಷಣ್ ರಾಮಕೃಷ್ಣ ಗವಾಯಿ ನೇಮಕಗೊಂಡಿದ್ದಾರೆ. ಗವಾಯಿ ದೇಶದ ಮೊದಲ ಬೌದ್ಧ, ಎರಡನೆಯ ದಲಿತ ಸಿಜೆಐ ಎಂಬ ಗೌರವಕ್ಕೆ ಪಾತ್ರರಾದರು.
ಬಿ.ಆರ್ ಗವಾಯಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ಆರಂಭಿಸಿದ್ದರು. ನಾಗ್ಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪದನಿಮಿತ್ತ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.
ಕಳೆದ ನವೆಂಬರ್‌ನಲ್ಲಿ ನ್ಯಾ. ಸಂಜೀವ್ ಖನ್ನಾ ಸುಪ್ರೀಂ ಕೋರ್ಟ್ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದರು. ನ್ಯಾಯಾಧೀಶರಾಗಿ 20 ವರ್ಷ ಸೇವೆ ಸಲ್ಲಿಸಿದ್ದ ಅವರು 6 ವರ್ಷ ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದರು. ಈ ಅವಧಿ ಯಲ್ಲಿ 370ನೇ ವಿಧಿ ರದ್ದು, ಚುನಾವಣಾ ಬಾಂಡ್, ಇವಿಎಂ ವಿವಿಪ್ಯಾಟ್ ಬಗ್ಗೆ ತೀರ್ಪು, ವ್ಯಭಿಚಾರವನ್ನು ಅಪರಾಧ ಮುಕ್ತಗೊಳಿಸುವ ಪ್ರಕರಣದ ವಿಚಾರಣೆ ನಡೆಸಿದ್ದರು. ನ್ಯಾ. ಯಶವಂತ್ ವರ್ಮಾ ನಿವಾಸದಲ್ಲಿ ಹಣ ಪತ್ತೆ ಪ್ರಕರಣ ತನಿಖೆ, ಸುಪ್ರೀಂ ನ್ಯಾಯಾಧೀಶರ ಆಸ್ತಿ ಬಹಿರಂಗ ಘೋಷಣೆಯಂತಹ ನಿರ್ಧಾರ ಕೈಗೊಂಡಿದ್ದರು.
ಅಧಿಕಾರದ ಕಡೆಯ ದಿನ ಮಾತನಾಡಿದ ನ್ಯಾಯಮೂರ್ತಿ ಖನ್ನಾ ನ್ಯಾಯಾಂಗದ ಬಗ್ಗೆ ಜನರ ನಂಬಿಕೆ ನಾವು ಆಜ್ಞಾಪಿಸಲು ಸಾಧ್ಯವಿಲ್ಲ, ಅದನ್ನು ಗಳಿಸಬೇಕು. ಸುಪ್ರೀಂ ಕೋರ್ಟ್ ಆ ಕೆಲಸ ಮಾಡಿದೆ ಎಂದು ಹೇಳಿದ್ದರು.


