ಸನಾತನ ಧರ್ಮಕ್ಕೆ ಅಪಮಾನ ಎಂದು ನಿಂದಿಸಿದ ವಕೀಲನೊಬ್ಬ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮೇಲೆ ಶೂ ಎಸೆದಿದ್ದಾನೆ.
ಸೋಮವಾರ ವಿಚಾರಣೆ ವೇಳೆ ವೃದ್ಧ ವಕೀಲ ಮುಖ್ಯ ನ್ಯಾಯಮೂರ್ತಿ ಮೇಲೆ ಎಸೆದ ಶೂ ಎಸೆದಿದ್ದು, ನ್ಯಾಯಾಲಯದ ಬೆಂಚ್ ಮುಂದೆ ಬಿದ್ದಿದೆ. ಶೂ ಗವಾಯಿ ಅವರ ಸಮೀಪವೂ ತಲುಪಲಿಲ್ಲ. ದಾಳಿ ನಡೆಸಿದ ವ್ಯಕ್ತಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಘಾತಕಾರಿ ಘಟನೆ ನಡುವೆಯೂ ವಿಚಲಿತರಾಗದ ಮುಖ್ಯ ನ್ಯಾಯಮೂರ್ತಿ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾರಿಗಾದರೂ ಅದರ ಮೇಲೆ ಪರಿಣಾಮ ಬೀರುತ್ತದೆ ಅಂದರೆ ಎಲ್ಲರಿಗಿಂತ ಕಡೆಯ ವ್ಯಕ್ತಿ ನಾನಾಗಿರುತ್ತೆನೆ ಎಂದು ಪ್ರತಿಕ್ರಿಯಿಸಿ ವಿಚಾರಣಾ ಪ್ರಕ್ರಿಯೆ ಮುಂದುವರಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ವಿಚಾರಣೆ ಆರಂಭವಾದಾಗ ಮೊದಲ ಪ್ರಕರಣ ಕೈಗೆತ್ತಿಕೊಂಡಾದ ವಕೀಲ ಸನಾತನ ಧರ್ಮದ ಅಪಮಾನ ಸಹಿಸಲ್ಲ ಎಂದು ಘೋಷಣೆ ಕೂಗಿ ಶೂವನ್ನು ನ್ಯಾಯಮೂರ್ತಿಗಳತ್ತ ಎಸೆದಿದ್ದಾನೆ.
ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ವಕೀಲನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವೃದ್ಧ ನಕಲಿ ಗುರುತು ಚೀಟಿ ಪಡೆದು ಕೋರ್ಟ್ ಪ್ರವೇಶಿಸಿದ್ದಾನೆ ಎಂದು ಹೇಳಲಾಗಿದ್ದು, ನಕಲಿ ಗುರುತು ಚೀಟಿ ಪ್ರಕಾರ ಆತನ ಹೆಸರು ಕಿಶೋರ್ ರಾಕೇಶ್ ಎಂದು ತಿಳಿದು ಬಂದಿದೆ.
ವಕೀಲ ಕಿಶೋರ್ ರಾಕೇಶ್ 2011ರಲ್ಲಿ ಬಾರ್ ಕೌನ್ಸಿಲ್ ಸದಸ್ಯನಾಗಿದ್ದು, ಮಧ್ಯಪ್ರದೇಶದಲ್ಲಿ ವಿಷ್ಣುವಿನ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣದಲ್ಲಿ ವಾದ ಮಾಡುತ್ತಿದ್ದರು. ಇತ್ತೀಚೆಗೆ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಇದು ಸಾರ್ವಜನಿಕ ಹಿತಾಸಕ್ತಿ ಅಡಿ ವಿಚಾರಣೆಗೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ವಕೀಲ ಕಿಶೋರ್ ವಾದ ಮುಂದುವರಿಸಿದಾಗ ನೀವು ಪರಮಭಕ್ತರು ಎಂದು ಹೇಳಿಕೊಳ್ಳಿತ್ತಿರಾ ದೇವರನ್ನೇ ಈ ಅನ್ಯಾಯ ಸರಿಪಡಿಸು ಎಂದು ಬೇಡಿಕೊಳ್ಳಿ ಎಂದು ಸಲಹೆ ನೀಡಿದ್ದರು.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.
ಘಟನೆ ಬಗ್ಗೆ ವಕೀಲ ಸಮುದಾಯದ ಆಘಾತ ವ್ಯಕ್ತಪಡಿಸಿದ್ದು, ಇದು ಜಾತಿವಾದಿಗಳಿಂದ ನ್ಯಾಯಾಲಯಕ್ಕೆ ಹಾಗೂ ದೇಶದ ಕಾನೂನಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


