ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದ ಆಯ್ಕೆ ಕಗ್ಗಂಟಾಗಿದ್ದು, ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ನೇಮಕಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿ ಲೋಕಸಭಾ ಚುನಾವಣೆಗೂ ಮುನ್ನವೇ ಮುಗಿದಿತ್ತು. ಆದರೆ ನಾನಾ ಕಾರಣಗಳಿಂದ ಅಧಿಕಾರಾವಧಿ ಮುಂದುವರಿಸಲಾಗಿತ್ತು.
ಇದೀಗ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ನೂತನ ರಾಷ್ಟ್ರಾಧ್ಯಕ್ಷರ ನೇಮಕ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮುಂದಾಗಿದ್ದು, ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಚಿಂತನೆ ನಡೆದಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿ ಬಿಜೆಪಿ ಇರುವುದರಿಂದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದು, ಸುಮಾರು 100 ಮುಖಂಡರು ಈ ಹುದ್ದೆಯ ಆಕಾಂಕ್ಷಿಗಳಾಗಿದ್ದು, ಮುಖಂಡರನ್ನು ಸಂಪರ್ಕಿಸಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವವರು, ಆರ್ ಎಸ್ ಎಸ್ ಹಿರಿಯ ಮುಖಂಡರು ಹಾಗೂ ಪಕ್ಷದಲ್ಲಿನ ಹಲವು ಮುಖಂಡರು ರಾಷ್ಟ್ರಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಹೆಸರು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದ ಆಯ್ಕೆಗೆ ಸ್ಥಳೀಯ ಚುನಾವಣೆ, ಪಕ್ಷದ ರಾಜ್ಯಾಧ್ಯಕ್ಷರ ನೇಮಕ, ಉಪ ರಾಷ್ಟ್ರಪತಿ ಚುನಾವಣೆ ಸೇರಿದಂತೆ ನಾನಾ ಅಡ್ಡಿಗಳು ಉಂಟಾಗಿದ್ದವು. ಜಗದೀಪ್ ಧಂಕರ್ ರಾಜೀನಾಮೆಯಿಂದ ಪಕ್ಷದಲ್ಲಿ ಗೊಂದಲ ಉಂಟಾಗಿದ್ದು, ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ ನಂತರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


