ಸಂಬಂಧ ಮುರಿಯುವುದು ಭಾವನಾತ್ಮಕವಾಗಿ ಯಾತನೆಯಿಂದ ಕೂಡಿರುತ್ತದೆ. ಆದರೆ ಅದರಿಂದ ಆತ್ಮಹತ್ಯೆಗೆ ಪ್ರಚೋದನಕಾರಿಯಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಂಬಂಧ ಮುರಿದಿದ್ದು ಆತ್ಮಹತ್ಯೆಗೆ ಪ್ರಚೋದನೆ ಎಂಬ ಕಾರಣಕ್ಕಾಗಿ ಕಮರುದ್ದೀನ್ ದಸ್ತಗಿರಿ ಸನಾದಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು.
ಇದು ಸಂಬಂಧ ಮುರಿದ ಪ್ರಕರಣ ಹೊರತು ಕ್ರಿಮಿನಲ್ ಅಪರಾಧ ಪ್ರಕರಣವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಮದುವೆ ಆಗುವುದಾಗಿ ನಂಬಿಸಿದ್ದ ಕಮರುದ್ದೀನ್ ದಸ್ತಗಿರಿ ಸನಾದಿ ನಂತರ ನಿರಾಕರಿಸಿದ್ದರಿಂದ ೨೧ ವರ್ಷದ ಮಗಳು ೨೦೦೭ ಆಗಸ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೊಟ್ಟ ಭರವಸೆ ಉಳಿಸಿಕೊಳ್ಳದ ಕಮರುದ್ದೀನ್ ವಿರುದ್ಧ ಮೃತಳ ತಾಯಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಸೆಕ್ಷನ್ ೪೧೭ [ವಂಚನೆ], ಷೆಕ್ಷನ್ ೩೦೬ [ಆತ್ಮಹತ್ಯೆಗೆ ಪ್ರಚೋದನೆ] ಮತ್ತು ಸೆಕ್ಷನ್ ೩೭೬ [ಅತ್ಯಾಚಾರ] ಅಡಿ ಆರೋಪಿಗೆ ೫ ವರ್ಷ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿತ್ತು.
೧೭ ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದ ನ್ಯಾಯಾಲಯ ಎಲ್ಲಾ ಆರೋಪಗಳಿಂದ ಕಮರುದ್ದೀನ್ ನನ್ನು ದೋಷ ಮುಕ್ತಗೊಳಿಸಿದ್ದು, ಮೃತಳ ಜೊತೆ ಆತ ಯಾವುದೇ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದೆ. ಅಲ್ಲದೇ ಸಂಬಂಧಗಳು ಬೇರ್ಪಟ್ಟಾಗ ಅತೀವ ನೋವಾಗುತ್ತದೆ. ಆದರೆ ಅದು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.