ದೇಹ ನೀಲಿಗಟ್ಟಿದ ಸ್ಥಿತಿಯಲ್ಲಿ 21 ವರ್ಷದ ರೂಪದರ್ಶಿಯನ್ನು ಆಸ್ಪತ್ರೆ ಮುಂದೆ ಪ್ರಿಯಕರ ಎಸೆದು ಹೋದ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ರೂಪದರ್ಶಿ ಖುಷ್ಬೂ ಅಹಿರ್ವಾರ್ ಎಂಬಾಕೆಯನ್ನು ಸೋಮವಾರ ಮುಂಜಾನೆ ಬಿಸಾಡಿ ಹೋಗಿದ್ದು, ಆಕೆಯ ಚಿಕಿತ್ಸೆ ಆರಂಭಿಸುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸೆಹೋರ್ ಜಿಲ್ಲೆಯ ಭೈನ್ಸಖೇಡಿ ಆಸ್ಪತ್ರೆಯ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಮೃತ ರೂಪರ್ಶಿ ದೇಹ ನೀಲಿಗಟ್ಟಿದ್ದು, ಖಾಸಗಿ ಭಾಗದಲ್ಲಿ ಗಾಯವಾಗಿದೆ. ಅಲ್ಲದೇ ದೇಹದ ಮೇಲೆಲ್ಲಾ ಹಲ್ಲೆಯಿಂದ ಮೂಗೇಟು ರೀತಿಯಲ್ಲಿ ಗಾಯಗಳಾಗಿದ್ದು, ಹಲವು ಕಡೆ ರಕ್ತ ದೇಹದ ಒಳಗೆ ಸೋರಿಕೆಯಾಗಿ ಹೆಪ್ಪುಗಟ್ಟಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದ.ೆ
ಮಗಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸಹಜ ಸಾವು ಅಲ್ಲದ ಕಾರಣ ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭಿಸಲಾಗಿದೆ.
ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ಲಕ್ಷ್ಮಿ ಅಹಿರ್ವಾರ್ ಆಸ್ಪತ್ರೆಯ ಹೊರಗೆ ದುಃಖ ವ್ಯಕ್ತಪಡಿಸಿದರು. “ಆಕೆಯ ದೇಹದಾದ್ಯಂತ ನೀಲಿ ಗುರುತುಗಳಿವೆ. ಆಕೆಯ ಮುಖ ಊದಿಕೊಂಡಿದೆ ಮತ್ತು ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ. ನನ್ನ ಮಗಳನ್ನು ಕ್ರೂರವಾಗಿ ಥಳಿಸಿ ಕೊಲ್ಲಲಾಯಿತು” ಎಂದು ಅವರು ಹೇಳಿದರು.
“ಆಕೆಯನ್ನು ಕತ್ತು ಹಿಸುಕಲಾಯಿತು. ಎಲ್ಲೆಡೆ ಮೂಗೇಟುಗಳಿವೆ. ನಮಗೆ ನ್ಯಾಯ ಬೇಕು. ಆಕೆಯನ್ನು ಕೊಂದ ವ್ಯಕ್ತಿಗೆ ಶಿಕ್ಷೆಯಾಗಬೇಕು” ಎಂದು ಅವರ ಸಹೋದರಿ ಆರೋಪಿಸಿದ್ದಾರೆ.
ಕುಟುಂಬದವರ ಪ್ರಕಾರ, ಖುಷ್ಬೂ 27 ವರ್ಷದ ಖಾಸಿಮ್ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು, ಅವರು ಆಕೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದಾಗಿನಿಂದ ಕಾಣೆಯಾಗಿದ್ದರು. ದಂಪತಿಗಳು ಉಜ್ಜಯಿನಿಯಿಂದ ಭೋಪಾಲ್‌ಗೆ ಹಿಂತಿರುಗುತ್ತಿದ್ದಾಗ ಖುಷ್ಬೂ ಅವರ ಸ್ಥಿತಿ ಹದಗೆಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರಜ್ಞಾಹೀನರಾಗಿರುವುದನ್ನು ನೋಡಿ ಖಾಸಿಮ್ ಅಲ್ಲಿಯೇ ಉಳಿಯುವ ಬದಲು ಪರಾರಿಯಾಗಿದ್ದರು.


