ಮತದಾರರನನ್ನು ಸೆಳಯಲು ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ಅದಾನಿ ಮತ್ತು ಅಂಬಾನಿ ಡ್ಯಾನ್ಸ್ ಮಾಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ ಬೇಗುಸರಾಯ್ ನಲ್ಲಿ ಭಾನುವಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆ ನೀಡುವ ಯಾವುದೇ ಭರವಸೆಗಳನ್ನು ಪೂರೈಸುವುದೇ ಇಲ್ಲ. ಚುನಾವಣೆ ನಂತರ ಜನರ ಮಾತು ಕೇಳಿಸಿಕೊಳ್ಳುವ ಸೌಜನ್ಯವೂ ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ದಿನದವರೆಗೂ ಪ್ರಧಾನಿ ಮೋದಿ ಬರ್ತಾರೆ ಭಾಷಣ ಮಾಡುತ್ತಾರೆ. ನೀವು ಏನು ಹೇಳಿದರೂ ಆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಚುನಾವಣೆ ನಂತರ ಅವರು ಬಿಹಾರಕ್ಕೂ ಬರುವುದಿಲ್ಲ. ನಿಮ್ಮ ಮಾತು ಕೇಳುವುದೂ ಇಲ್ಲ. ನೀವು ಏನೇ ಮಾಡಬೇಕು ಅಂದರೂ ಈಗಲೇ ಮಾಡಬೇಕು ಎಂದು ಕರೆ ನೀಡಿದರು.
ಮತ ಗಳಿಸಲು ಮೋದಿ ಏನೂ ಬೇಕಾದರೂ ಮಾಡುತ್ತಾರೆ. ನೀವು ಯೋಗ ಮಾಡಿ ಅಂತಾರೆ. ಅವರು ಕೆಲವು ಆಸನಗಳನ್ನು ಮಾಡಿ ತೋರಿಸುತ್ತಾರೆ. ಆದರೆ ಚುನಾವಣೆ ನಂತರ ಏನೂ ಮಾಡಲ್ಲ. ಉದ್ಯಮ ಸ್ನೇಹಿತರಾದ ಅಂಬಾನಿ ಮತ್ತು ಅದಾನಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಮೋದಿ ಕೇವಲ ಅಂಬಾನಿ ಮತ್ತು ಅದಾನಿ ಅವರ ರಿಮೋಟ್ ಕಂಟ್ರೋಲ್ ಆಗಿ ಕೆಲಸ ಮಾಡುತ್ತಾರೆ ಹೊರತು ಜನರಿಗಾಗಿ ಅಲ್ಲ ಎಂದು ಅವರು ಹೇಳಿದರು.
ಮೋದಿ ನಾನು 56 ಇಂಚಿನ ಹೃದಯ ಇರುವ ವ್ಯಕ್ತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಡೊನಾಲ್ಡ್ ಟ್ರಂಪ್ ಹೇಳಿದ ಕೂಡಲೇ ಆಪರೇಷನ್ ಸಿಂಧೂರ್ ನಿಲ್ಲಿಸುತ್ತಾರೆ. ಮೋದಿ ಟ್ರಂಪ್ ಅವರಿಗೆ ಎಷ್ಟು ಭಯಪಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಟ್ರಂಪ್ ಮಾತಿಗೆ ಬೆಲೆಕೊಟ್ಟು 2 ದಿನದಲ್ಲೇ ಯುದ್ಧ ನಿಲ್ಲಿಸಿದರು ಎಂದು ರಾಹುಲ್ ಹೇಳಿದರು.
ಕೆರೆಗೆ ಇಳಿದು ಮೀನು ಹಿಡಿದ ರಾಹುಲ್
ಇದೇ ವೇಳೆ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ ರಾಹುಲ್ ಗಾಂಧಿ ಬಿಹಾರದಲ್ಲಿ ಸ್ಥಳೀಯ ಮೀನುಗಾರರ ಜೊತೆ ಕೆರೆಗೆ ಇಳಿದು ಮೀನು ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.


