ಕೊಯಮತ್ತೂರು: ಭಾರತೀಯ ಕೃಷಿ ಕ್ಷೇತ್ರದ ಪರಿವರ್ತನೆಗೆ ನೈಸರ್ಗಿಕ ಬೇಸಾಯ ವಿಧಾನ ಬಹಳ ಮುಖ್ಯವಾದುದು, ರಾಸಾಯನಿಕ ಬಳಕೆ ಕಡಿಮೆ ಮಾಡಿ ಪರಿಸರಸ್ನೇಹಿ ಕೃಷಿ ವಿಧಾನ ಅನುಸರಿಸುವಂತೆ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ತಮ್ಮ ಲಿಂಕ್ಡ್ಇನ್ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪ್ರಧಾನಿಗಳು ಬ್ಲಾಗ್ ಬರೆದಿದ್ದು, ಅದರಲ್ಲಿ ನೈಸರ್ಗಿಕ ಕೃಷಿ ಕುರಿತು ಅವರ ಅನುಭವಗಳನ್ನು ಹಂಚಿಕೊಂಡು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಪರಿಸರೀಯ ತತ್ವಗಳ ಸಮ್ಮಿಳನ ನೈಸರ್ಗಿಕ ಕೃಷಿ ಎಂಬುದು ಭಾರತದ ಸಾಂಪ್ರದಾಯಿಕ ಜ್ಞಾನ ಹಾಗೂ ಆಧುನಿಕ ಪರಿಸರೀಯ ತತ್ವಗಳ ಸಮ್ಮಿಶ್ರಣ ಎಂದು ಬಣ್ಣಿಸಿದ್ದಾರೆ.
ಕಳೆದ ತಿಂಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯಲ್ಲಿ ಪಾಲ್ಗೊಂಡು, ಅದರಲ್ಲಿ ಸಿಕ್ಕ ಅನುಭವವನ್ನು ಪ್ರಧಾನಿಗಳು ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನ ರೈತರು ನೈಸರ್ಗಿಕ ಕೃಷಿ ಪದ್ಧತಿಗೆ ಹಾಕುತ್ತಿರುವ ಶ್ರಮ ತಮ್ಮನ್ನು ಅಚ್ಚರಿಗೊಳಿಸಿತು. ಭಾರತೀಯ ರೈತರು ಮತ್ತು ಕೃಷಿ ಉದ್ದಿಮೆದಾರರು ಈ ಕೃಷಿ ಕ್ಷೇತ್ರದ ಅಭಿವೃದ್ಧಿಪಡಿಸುತ್ತಿರುವ ಪರಿ, ತಮಗೆ ಭರವಸೆ ಮೂಡಿಸಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಕೃಷಿಗಾರಿಕೆಯಲ್ಲಿ ರಾಸಾಯನಿಕ ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ ನಿಲ್ಲಿಸಬೇಕು. ಗಿಡ, ಮರ, ಜಾನುವಾರಗಳು ಒಟ್ಟಿಗೆ ಇದ್ದು ನೈಸರ್ಗಿಕವಾದ ಜೀವವೈವಿಧ್ಯತೆಯನ್ನು ಬೆಂಬಲಿಸುವಂತಹ ಕೃಷಿ ಭೂಮಿ ಸೃಷ್ಟಿಯಾಗಬೇಕು. ಕೃಷಿ ತ್ಯಾಜ್ಯಗಳ ಮರುಬಳಕೆ, ಮಲ್ಚಿಂಗ್ ಇತ್ಯಾದಿ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕೆಲಸ ಆಗಬೇಕು ಎಂದು ಪ್ರಧಾನಿಗಳು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.
ಪ್ರಧಾನಿಗಳು ಕೊಯಮತ್ತೂರಿನ ಕೃಷಿ ಕಾರ್ಯಕ್ರಮದಲ್ಲಿ ಭೇಟಿಯಾದ ಕೆಲ ರೈತರ ಅನುಭವಗಳನ್ನೂ ನೆನಪು ಮಾಡಿಕೊಂಡು ಒಬ್ಬ ರೈತ 10 ಎಕರೆ ಭೂಮಿಯಲ್ಲಿ ಬಹುಸ್ತರ ಕೃಷಿ ಮೂಲಕ ಬಾಳೆ, ತೆಂಗು, ಪಪ್ಪಾಯ, ಕಾಣುಮೆಣಸು, ಅರಿಶಿನವನ್ನು ಬೆಳೆದಿರುವುದಲ್ಲದೆ, 60 ದೇಸೀ ಹಸುಗಳು, 400 ಆಡು ಕುರಿಗಳು ಹಾಗೂ ನಾಟಿ ಕೋಳಿಗಳನ್ನು ಸಾಕುತ್ತಿರುವ ಸಂಗತಿಯನ್ನು ಮೋದಿ ಮೆಲುಕು ಹಾಕಿದ್ದಾರೆ.
ಸ್ಥಳೀಯ ತಳಿಯ ಅಕ್ಕಿ ಬೆಳೆದು, ಪ್ರೋಟೀನ್ ಬಾರ್, ಹೆಲ್ತ್ ಮಿಕ್ಸ್, ಪುರಿ ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುವ ರೈತ; 15 ಎಕರೆ ಜಾಗದಲ್ಲಿ ನೈಸರ್ಗಿಕ ಕೃಷಿ ನಡೆಸಿ ಪ್ರತೀ ತಿಂಗಳು 30 ಟನ್ ತರಕಾರಿ ಮಾರುವ ಪದವೀಧರ ರೈತ ಇತ್ಯಾದಿ ಹಲವರ ಅನುಭವಗಳನ್ನು ಮೋದಿ ತಮ್ಮ ಬ್ಲಾಗ್ನಲ್ಲಿ ಹೈಲೈಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರ ಹಾಗೂ ನೈಸರ್ಗಿಕ ಕೃಷಿಗಾರಿಕೆಗೆ ವಿವಿಧ ಯೋಜನೆಗಳ ಮೂಲಕ ಹೇಗೆ ಪುಷ್ಟಿ ಕೊಡಲು ಯತ್ನಿಸುತ್ತಿದೆ ಎಂಬುದನ್ನೂ ಮೋದಿ ವಿವರಿಸಿದ್ದಾರೆ. ಕಳೆದ ವರ್ಷ ಜಾರಿಗೆ ಬಂದ ನೈಸರ್ಗಿಕ ಕೃಷಿ ಮಿಷನ್ ಮೂಲಕ ಲಕ್ಷಾಂತರ ರೈತರು ಸಾಂಪ್ರದಾಯಿಕ ಕೃಷಿ ವಿಧಾನ ಅಳವಡಿಸಿಕೊಂಡಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಂ ಕಿಸಾನ್ ಸೌಲಭ್ಯಗಳು ರೈತರಿಗೆ ನೈಸರ್ಗಿಕ ಕೃಷಿ ವಿಧಾನ ಅಳವಡಿಸಿಕೊಳ್ಳಲು ಧೈರ್ಯ ನೀಡಿವೆ. ಸರ್ಕಾರವು ಸಿರಿಧಾನ್ಯಗಳಿಗೆ ಒತ್ತು ನೀಡುವ ಮೂಲಕ ನೈಸರ್ಗಿಕ ಕೃಷಿಗೆ ರೈತರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಪಂಚಗವ್ಯ, ಜೀವಾಮೃತಗಳ ಬಳಕೆಗೆ ಕರೆ
ರಾಸಾಯನಿಕ, ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಸಾರ ಕಡಿಮೆ ಆಗುತ್ತದೆ. ಕೃಷಿಗಾರಿಕೆ ವೆಚ್ಚ ಹೆಚ್ಚುತ್ತದೆ ಎಂದು ಹೇಳಿರುವ ಮೋದಿ, ನೈಸರ್ಗಿಕ ವಿಧಾನದಿಂದ ಈ ಸಮಸ್ಯೆ ನಿವಾರಿಸಬಹುದು ಎಂದಿದ್ದಾರೆ. ಪಂಚಗವ್ಯ, ಜೀವಾಮೃತ, ಬೀಜಾಮೃತ ಮತ್ತು ಮಲ್ಚಿಂಗ್ನಿಂದ ಮಣ್ಣಿನ ಆರೋಗ್ಯ ಕಾಪಾಡಬಹುದು. ಹವಾಮಾನ ಬದಲಾವಣೆ ಸಮಸ್ಯೆಯಲ್ಲೂ ಕೃಷಿಯನ್ನು ನಡೆಸಬಹುದು ಎಂದು ಬಣ್ಣಿಸಿದ್ದಾರೆ.


