ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ಕಾಂಗ್ರೆಸ್ ಪರ ವಕೀಲ ರೋಹಿತ್ ಪಾಂಡೆ ಸಲ್ಲಿಸಿದ್ದು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸಂಪೂರ್ಣ ವಿಚಾರಣೆ ನಡೆಸಬೇಕು, ತನಿಖೆ ಮುಗಿಯುವವರೆಗೆ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬುದಾಗಿ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ ಗಂಭೀರ ಅಕ್ರಮಗಳ ಆರೋಪ ಹೊರಿಸಲ್ಪಟ್ಟಿದ್ದು, ನೂರಾರು ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿರುವುದು, ಅನೇಕ ಅರ್ಹ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದು ಹಾಗೂ ಮತದಾರರ ಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆಗೆ ಅನುಕೂಲವಾಗುವಂತೆ ಯಂತ್ರ ಓದಲು ಸಾಧ್ಯವಾಗುವ ಸ್ವರೂಪದಲ್ಲಿ ಪ್ರಕಟಿಸದಿರುವುದು ಪಾರದರ್ಶಕತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ.
ಪಾಂಡೆ ಅವರು, “ಸ್ವತಂತ್ರ ಹಾಗೂ ನ್ಯಾಯಸಮ್ಮತ ಚುನಾವಣೆಯ ಅಡಿಪಾಯವೇ ಶುದ್ಧ ಮತದಾರರ ಪಟ್ಟಿ. ಅದರಲ್ಲಿಯೂ ದೋಷಗಳು, ತಿದ್ದುಪಡಿಗಳು ಹಾಗೂ ನಕಲಿ ಹೆಸರುಗಳು ಕಂಡುಬAದರೆ, ಪ್ರಜಾಪ್ರಭುತ್ವದ ಪ್ರಕ್ರಿಯೆಯೇ ಅಪಾಯಕ್ಕೆ ಸಿಲುಕುತ್ತದೆ” ಎಂದು ವಾದಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಡಿ ವಿಶೇಷ ತನಿಖಾ ತಂಡ ರಚನೆ;
ತನಿಖೆ ಪೂರ್ಣಗೊಳ್ಳುವವರೆಗೆ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡದಂತೆ ತಡೆ;
ಪಾರದರ್ಶಕತೆ ಹಾಗೂ ಜವಾಬ್ದಾರಿತ್ವ ಕಾಪಾಡಲು ಸ್ಪಷ್ಟ ಮಾರ್ಗಸೂಚಿ ನೀಡುವುದು;
ಸಾರ್ವಜನಿಕ ಪರಿಶೀಲನೆಗಾಗಿ ಯಂತ್ರ ಓದಲು ಸಾಧ್ಯವಾಗುವ ಸ್ವರೂಪದಲ್ಲಿ ಮತದಾರರ ಪಟ್ಟಿ ಪ್ರಕಟಿಸುವ ಕಡ್ಡಾಯ.
ಗಂಭೀರ ಆಕ್ಷೇಪ
ಚುನಾವಣಾ ಆಯೋಗವು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಡೆಸಿದ ಪಟ್ಟಿ ತಿದ್ದುಪಡಿ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಪಕ್ಷದ ಪ್ರಕಾರ, ಉದ್ದೇಶಪೂರ್ವಕವಾಗಿ ನಕಲಿ ಮತದಾರರನ್ನು ಸೇರಿಸುವುದರ ಜೊತೆಗೆ ಪ್ರತಿಪಕ್ಷ ಬೆಂಬಲಿಗರ ಹೆಸರುಗಳನ್ನು ಕೈಬಿಡಲಾಗಿದೆ.
ಈ ಪಿಐಎಲ್ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಇದನ್ನು ಪ್ರಜಾಪ್ರಭುತ್ವ ರಕ್ಷಣೆಗೆ ಅಗತ್ಯವಾದ ಹೋರಾಟವೆಂದು ಘೋಷಿಸಿದೆ. ಒಂದೆಡೆ, ಬಿಜೆಪಿ ಮೂಲಗಳು ಇದನ್ನು ರಾಜಕೀಯ ಪ್ರಚಾರಕ್ಕೆ ಕೈಗೊಂಡ ಹೆಜ್ಜೆ ಎಂದು ವ್ಯಾಖ್ಯಾನಿಸಿವೆ.
ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ತೀರ್ಪು ದೇಶದಾದ್ಯಂತ ನಡೆಯುವ ಮುಂದಿನ ಚುನಾವಣೆಗಳಿಗೂ ಮಾದರಿ ನಿರ್ಧಾರವಾಗಬಹುದೆಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


