ಸಾಮಾಜಿಕ ಅಶಾಂತಿ ಸೃಷ್ಟಿಸಿರುವ ಉತ್ತರ ಪ್ರದೇಶದ ಸಂಭಾಲ್‌ನ ಜಾಮಾ ಮಸೀದಿ ಸಮೀಕ್ಷೆಯ ಸರ್ವೇ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ತಡೆ ಹಾಕಿದೆ.
ಮಸೀದಿ ಸಮೀಕ್ಷೆ ಕುರಿತ ಟ್ರಯಲ್ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಶಾಂತಿ ಕಾಪಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
ಸರ್ವೆ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಅರ್ಜಿಯನ್ನು ಹೈಕೋರ್ಟ್ನಲ್ಲಿ ಪಟ್ಟಿ ಮಾಡುವವರೆಗೆ ಸಂಭಾಲ್ ಜಾಮಾ ಮಸೀದಿ ವಿರುದ್ಧದ ಮೊಕದ್ದಮೆಯನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
“ಅಡ್ವೊಕೇಟ್ ಕಮಿಷನರ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡುವಂತೆ ಮತ್ತು ಅದನ್ನು ತೆರೆಯದಂತೆ ನಾವು ನಿರ್ದೇಶಿಸುತ್ತೇವೆ. ಯಾವುದೇ ಕಾರಣಕ್ಕೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಸಿಜೆಐ ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠವು ಹೇಳಿದೆ.
ಮಸೀದಿಯ ಸರ್ವೇಗೆ ಆದೇಶ ನೀಡಿರುವ ವಿಚಾರಣಾ ನ್ಯಾಯಾಲಯವು ಮುಂದಿನ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
“ಅವರು (ಮಸೀದಿ ಸಮಿತಿ) ಹೈಕೋರ್ಟ್‌ಗೆ ತೆರಳುವವರೆಗೆ ಯಾವುದೇ ಅಹಿತಕರ ಘಟನೆಗಳು ಆಗಬಾರದು ಎಂದು ನಾವು ಬಯಸುತ್ತೇವೆ. ವಿಚಾರಣಾ ನ್ಯಾಯಾಲಯ ತನ್ನ ಆದೇಶವನ್ನು ಜಾರಿಗೆ ತರಬಾರದು” ಎಂದು ಸಿಜೆ ಹೇಳಿದರು.
ಏನಿದು ಪ್ರಕರಣ?
ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಮೊಘಲರ ಕಾಲದ ಮಸೀದಿಯ ಸರ್ವೆ ನಡೆಸುವಂತೆ ಜಿಲ್ಲಾ ನ್ಯಾಯಾಲಯವು ನವೆಂಬರ್ 19 ರಂದು ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ವಿಚಾರಣೆ ನಡೆಸಿತು. ಪ್ರಾಚೀನ ಹರಿಹರ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜಾಮಾ ಮಸೀದಿ ಸಮಿತಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮಸೀದಿಯ ಸರ್ವೇಗೆ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ನಂತರ ಅಲ್ಲಿ ಹಿಂಸಾಚಾರ ಭುಗಿಲೆದ್ದಿತು.