ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಚಿಕ್ಕಡಪಳ್ಳಿ ಪೊಲೀಸ್ ಠಾಣೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಾಂಪಲ್ಲಿ ನ್ಯಾಯಾಲಯ ಡಿಸೆಂಬರ್ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಇದರಿಂದ ಅಲ್ಲು ಅರ್ಜುನ್ ಚಂಚಲಗೂಡ ಜೈಲಿಗೆ ರವಾನಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ವಾರಾಂತ್ಯವಾಗಿದ್ದರಿಂದ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿ ಸೋಮವಾರದವರೆಗೆ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿದ್ದು ವಿಫಲವಾಯಿತು.
ಎರಡು ವಾರಗಳ ಹಿಂದೆ ಬಿಡುಗಡೆ ಆದ ಪುಷ್ಪ-೨ ಚಿತ್ರದ ಪ್ರದರ್ಶನ ವೇಳೆ ಸಂಧ್ಯಾ ಥಿಯೇಟರ್ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದು, ಆಕೆಯ ಪುತ್ರ ಅಸ್ವಸ್ಥಗೊಂಡಿದ್ದ.
ಕಾಲ್ತುಳಿತ ಪ್ರಕರಣಕ್ಕೆ ನಟ ಅಲ್ಲು ಅರ್ಜುನ್ ಅವರೇ ಕಾರಣರಾಗಿದ್ದು, ಪೊಲೀಸರಿಗೆ ಚಿತ್ರ ತಂಡವಾಗಲಿ, ಥಿಯೇಟರ್ ಮಾಲೀಕರಾಗಲಿ ಮಾಹಿತಿ ನೀಡದೇ ಇರುವುದು ಹಾಗೂ ಜನದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವ ಕಾರಣಕ್ಕೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಲ್ಲು ಅರ್ಜುನ್ ವಿರುದ್ಧದ ಪೊಲೀಸರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದು, ಆರೋಪ ಸಾಬೀತಾದರೆ ಕನಿಷ್ಠ ೫ರಿಂದ ೧೦ ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಅವರ ತಂದೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸ್ಪಂದಿಸಿದ್ದ ಅಲ್ಲು ಅರ್ಜುನ್ ಮೃತರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದರು. ಅಲ್ಲದೇ ಮಗನ ಉಸ್ತುವಾರಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.