ಮುಂಬೈ: ಸ್ಪಷ್ಟ ಬಹುಮತ ಗಳಿಸಿದ್ದರೂ ಹೊಸ ಸರಕಾರ ರಚಿಸಲು ಬಿಜೆಪಿ ನೇತೃತ್ವದ ಮಹಾಯುತಿ ಕೂಟದ ತಿಣುಕಾಟದ ಫಲವಾಗಿ ಸಿಎಂ ಆಯ್ಕೆ ಇನ್ನೂ ಎರಡು ದಿನ ಮುಂದಕ್ಕೆ ಹೋಗಿದೆ ಎಂದು ವರದಿ ತಿಳಿಸಿವೆ.
ಬಿಜೆಪಿ ಹೈಕಮಾಂಡ್ ಭೇಟಿಯ ಬಳಿಕ ಶುಕ್ರವಾರ ಮಾತನಾಡಿರುವ ಅವರು, ನಾಯಕರೊಂದಿಗೆ ಉತ್ತಮ ಮತ್ತು ಸಕಾರಾತ್ಮಕ ಚರ್ಚೆಗಳು ನಡೆದಿದ್ದು, ಮುಂಬೈನಲ್ಲಿ ಮಹಾಯುತಿ ಮೈತ್ರಿಯ ಮತ್ತೊಂದು ಸಭೆಯ ಬಳಿಕ ಮಹಾರಾಷ್ಟ್ರ ಸಿಎಂ ಯಾರೆಂಬ ನಿರ್ಧಾರವಾಗಲಿದ ಎಂದ ಹಂಗಾಮಿ ಸಿಎಂ ಏಕನಾಥ್ ಹೇಳಿದ್ದಾರೆ.
ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಹೆಸರು ಘೋಷಿಸಲು ಇಂದು ನಡೆಯಬೇಕಿದ್ದ ಮಹಾಯುತಿ ಸಭೆ ಏಕಾಏಕಿ ರದ್ದಾಗಿದೆ. ಅಷ್ಟಲ್ಲದೇ ಏಕನಾಥ್ ಶಿಂಧೆ ತಮ್ಮ ಸ್ವಕ್ಷೇತ್ರಕ್ಕೆ ಪ್ರಯಾಣ ಬೆಳಸಿದ್ದಾರೆ.
ಮುಂದಿನ 2 ದಿನಗಳ ಕಾಲ ಈ ಸಭೆ ನಡೆಯುವುದಿಲ್ಲ. ಸಭೆಯನ್ನು ರದ್ದುಗೊಳಿಸಲು ಕಾರಣ ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿಯ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿದ ನಂತರವೇ ಮಹಾಮೈತ್ರಿಕೂಟ ಸಭೆ ನಡೆಯಲಿದೆ ಎನ್ನಲಾಗಿದೆ.
ಬಿಜೆಪಿಗೆ ಸಿಂಹಪಾಲು
ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿರುವ ಬಿಜೆಪಿ, ಸರ್ಕಾರ ರಚನೆಯಲ್ಲಿ ಹೆಚ್ಚಿನ ಲಾಭ ಪಡೆಯಲಿದ್ದು, ಕಿಂಗ್ ಮೇಕರ್ ಆಗಲಿದೆ.
ಈ ಮಧ್ಯೆ, ಮಹಾಯುತಿ ಮೈತ್ರಿಯನ್ನು ಕಾಡುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ, ಸಿಎಂ ಆಗಿ ಆಡಳಿತ ನಡೆಸಿದ ಏಕನಾಥ್ ಶಿಂಧೆಗೆ ಯಾವ ಸ್ಥಾನ ಸಿಗಲಿದೆ ಎಂಬುದಾಗಿದೆ. ಮೂಲಗಳ ಪ್ರಕಾರ, 132 ಸೀಟುಗಳನ್ನು ಗೆದ್ದ ಬಿಜೆಪಿಗೆ ಇದೊಂದು ದೊಡ್ಡ ಸವಾಲು ಕೂಡ ಆಗಿದೆ.