ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯ ಶವ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ.
ರೋಹ್ಟಕ್ ಜಿಲ್ಲೆಯ ಹಿಮಾನಿ ನರ್ವಾಲ್ (22) ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತೆ. ಈಕೆ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಭಾನುವಾರ 32 ಸ್ಥಳೀಯ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಮಾರ್ಚ್ 12ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಹಿಂದಿನ ದಿನ ಘಟನೆ ನಡೆದಿರುವುದು ಆಘಾತ ಮೂಡಿಸಿದೆ. ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಸಂಪ್ಲಾ ಬಸ್ ನಿಲ್ದಾಣದ ಪಕ್ಕದಲ್ಲಿ ಸೂಟ್ ಕೇಸ್ ಪತ್ತೆಯಾಗಿದ್ದು, ಅನುಮಾನಗೊಂಡು ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ನಂತರ ಇದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯದ್ದು ಎಂದು ತಿಳಿದು ಬಂದಿದೆ. ಮೃತ ಹಿಮಾನಿ ಕೈಯಲ್ಲಿ ಮೆಹಂದಿ ಇದ್ದು, ಕುತ್ತಿಗೆಯನ್ನು ದುಪ್ಪಟ್ಟದಿಂದ ಸುತ್ತಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹಿಮಾನಿ ನರ್ವಾಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಲವಾರು ಪ್ರಮುಖ ಗಣ್ಯರೊಂದಿಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಮಾಜಿ ಸಿಎಂ ಭೂಪೆಂದರ್ ಸಿಂಗ್ ಪುತ್ರ, ಕಾಂಗ್ರೆಸ್ ಸಂಸದ ದೀಪೆಂದರ್ ಸಿಂಗ್ ಹೂಡಾ, ಶಾಸಕ ಬಿಬಿ ಬಾತ್ರಾ ಮುಂತಾದವರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಅಲ್ಲದೇ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಇರುವ ಫೋಟೊ ಕೂಡ ಹಾಕಿಕೊಂಡಿದ್ದಾರೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


