ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇದರಿಂದ ಕೇರಳದಲ್ಲಿ ಕಳೆದ ಒಂದು ತಿಂಗಳಲ್ಲಿ ಅಮಿಬಾಗೆ ಮೃತಪಟ್ಟರ ಸಂಖ್ಯೆ 5ಕ್ಕೇರಿದೆ.
ಕೊಯಿಕ್ಕೋಡ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಂಡೂರಿನ ಶೋಭನಾ (56) ಎಂಬಾಕೆ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ 9 ವರ್ಷದ ಬಾಲಕಿ ಓಮಸ್ಸೇರಿಯ, ಮೂರು ತಿಂಗಳ ಮಗು, ಮಲಪ್ಪುರಂನ ಮಹಿಳೆ ಮತ್ತು ವಯನಾಡಿನ ರತೀಶ್ ಎಂಬುವರು ಕೂಡಾ ಇದೇ ಸೋಂಕಿಗೆ ಬಲಿಯಾಗಿದ್ದರು.
‘ಕಾಸರಗೋಡಿನ ಯುವಕ ಮತ್ತು ಮಲಪ್ಪುರಂನ ವ್ಯಕ್ತಿಯೊಬ್ಬರು ಪ್ರಸ್ತುತ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಒಟ್ಟು 10 ಜನರು ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಡಿಎಂಒ ಮಾಹಿತಿ ನೀಡಿದ್ದಾರೆ.
ಮೆದುಳನ್ನು ತಿನ್ನುವ ಅಮೀಬಾ ಲಕ್ಷಣಗಳು
ನೇಗ್ಲೇರಿಯಾ ಫೌಲೆರಿ ಎಂದು ಕರೆಯಲ್ಪಡುವ ಅಮೀಬಾವನ್ನು ಸಾಮಾನ್ಯವಾಗಿ ‘ಮೆದುಳನ್ನು ತಿನ್ನುವ ಅಮೀಬಾ’ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಸರೋವರಗಳು, ನದಿಗಳು, ಬುಗ್ಗೆಗಳು ಮತ್ತು ಕೊಳಗಳಂತಹ ಸಿಹಿನೀರಿನಲ್ಲಿ ಕಂಡುಬರುತ್ತದೆ, ಬೆಚ್ಚಗಿನ ನೀರಿನಲ್ಲಿ ಸಮೃದ್ಧವಾಗಿರುತ್ತದೆ.
ಸಾಮಾನ್ಯವಾಗಿ ಕಲುಷಿತ ನೀರಿನಲ್ಲಿ ಈಜುವಾಗ ಅಥವಾ ಡೈವಿಂಗ್ ಮಾಡುವಾಗ ಅಮೀಬಾ ಮೂಗಿನ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ. ಒಮ್ಮೆ ಒಳಗೆ ಹೋದ ನಂತರ, ಅದು ಮೆದುಳನ್ನು ತಲುಪುತ್ತದೆ. ಇದು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲ್ಪಡುವ ತೀವ್ರವಾದ ಸೋಂಕನ್ನು ಉಂಟುಮಾಡುತ್ತದೆ. ಈ ಸೋಂಕಿನಿಂದಾಗಿ 1 ರಿಂದ 9 ದಿನಗಳಲ್ಲಿ ತೀವ್ರ ತಲೆನೋವು, ಜ್ವರ, ವಾಂತಿ, ಕುತ್ತಿಗೆ ಬಿಗಿತ, ಗೊಂದಲಗಳು ಕಾಣಿಸಿಕೊಳ್ಳುತ್ತವೆ.
ಸೋಂಕಿನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಆರೋಗ್ಯ ಅಧಿಕಾರಿಗಳು ಸೋಂಕಿನ ನಿಖರವಾದ ಮೂಲವನ್ನು ಇನ್ನೂ ಗುರುತಿಸಿಲ್ಲ. ಚಿಕಿತ್ಸೆ ಪಡೆಯುತ್ತಿರುವ ಕೆಲವು ರೋಗಿಗಳು ಕೊಳಗಳು ಅಥವಾ ನದಿಗಳಲ್ಲಿ ಈಜಿದ ಇತಿಹಾಸವನ್ನು ಹೊಂದಿಲ್ಲ. ಸಾವನ್ನಪ್ಪಿದ ಮೂರು ತಿಂಗಳ ಮಗುವಿನ ಸಂಬಂಧಿಕರು ಮಗುವನ್ನು ಬಾವಿ ನೀರಿನಲ್ಲಿ ಸ್ನಾನ ಮಾಡಿಸಲಾಗಿತ್ತು ಎಂದು ಹೇಳಿದ್ದಾರೆ.


