ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಮೂಲಕ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ನ್ಯಾಯಮೂರ್ತಿ ಎಂ.ಜಿ.ಉಮಾ ನೇತೃತ್ವದ ಪೀಠ ಶುಕ್ರವಾರ ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಸಿಟಿ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಸಿಟಿ ರವಿ ಅವರ ಮೇಲೆ ಹಾಕಲಾಗಿರುವ ಸೆಕ್ಷನ್ ಗಳು ೩ರಿಂದ ೭ ವರ್ಷ ಶಿಕ್ಷೆಯದ್ದಾಗಿದೆ. ಅಲ್ಲದೇ ಸದನದಲ್ಲಿ ನಡೆದ ಘಟನೆ ಅಥವಾ ಅದರ ನಂತರದ ಘಟನೆಗಳಿಗೆ ದಾಖಲೆ ಸಾಕ್ಷಿಗಳು ಇಲ್ಲದ ಕಾರಣ ತಕ್ಷಣ ಬಿಡುಗಡೆಗೆ ಸೂಚಿಸಲಾಗಿದೆ. ಆದೆ ತನಿಖೆಗೆ ಸಹಕರಿಸುವಂತೆ ಸಿಟಿ ರವಿಗೆ ಸೂಚಿಸಲಾಗಿದೆ.
ಬೆಳಗಾವಿ ವಿಧಾನಪರಿಷತ್ ಕಲಾಪದಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಿಟಿ ರವಿ ವಿರುದ್ಧ ಬೆಳಗಾವಿಯ ಹೀರೇಬಾಗೇನವಾದಿ ಪೊಲೀಸ್ ಠಾಣೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲಿಖಿತ ದೂರು ನೀಡಿದ್ದರು.
ದೂರಿನ ಅನ್ವಯ ವಿಧಾನಸಭೆಯ ಬಳಿ ಬಂಧಿಸಿದ್ದ ಪೊಲೀಸರು ಸುರಕ್ಷತೆ ದೃಷ್ಟಿಯಿಂದ ರಾತ್ರಿಯಿಡೀ 3 ಜಿಲ್ಲೆಗಳಲ್ಲಿ ವಾಹನದಲ್ಲಿ ಸುತ್ತಾಡಿಸಿದ್ದಾರೆ.
ಸಿಟಿ ರವಿ ಮೂರು ಕಡೆ ಮಧ್ಯಂತರ ಜಾಮೀನು, ಪ್ರಕರಣ ರದ್ದು ಸೇರಿದಂತೆ ೩ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಬೆಳಗಾವಿ ಸೆಷನ್ಸ್ ನ್ಯಾಯಾಲಯ ಸಿಟಿ ರವಿ ಅವರನ್ನು ಬೆಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದರು.
ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಕರೆತರುತ್ತಿದ್ದು, ಶಿಗ್ಗಾಂವಿ ಬಳಿ ಸಂಜೆ ಊಟಕ್ಕೆ ನಿಲ್ಲಿಸಿದ್ದಾರೆ. ಇದೀಗ ಸಿಟಿ ರವಿ ಅವನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡುತ್ತಾರೋ ಅಥವಾ ಯಾವಾಗ ಬಿಡುಗಡೆ ಮಾಡುತ್ತಾರೋ ಎಂಬುದು ಕಾದು ನೋಡಬೇಕಿದೆ.