ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಗುರುವಾರ ದಿಢೀರನೆ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಕಸರತ್ತು ಆರಂಭವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹರಿಪ್ರಸಾದ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದು, ಇದೀಗ ಅಂತಿಮ ಘಟ್ಟ ತಲುಪಿದೆ ಎನ್ನಲಾಗಿದೆ.
ವಿಧಾನ ಪರಿಷತ್ ಗೆ ಆಯ್ಕೆಯಾದ ನಂತರ ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಮೇಲೆ ಒತ್ತಡಗಳು ಬರುತ್ತಲೇ ಇದ್ದವು. ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ಜೂನ್ ಎರಡನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೂನ್ ಮೊದಲ ಮತ್ತು ಎರಡನೇ ವಾರದಲ್ಲಿ ದೆಹಲಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮತ್ತು ವೇಣುಗೋಪಾಲ್ ಬಿಕೆ ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದರು. ರಾಹುಲ್ ಗಾಂಧಿ ಸೂಚನೆ ಮೇರೆಗೆ ಬಿಕೆ ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಒಪ್ಪಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಜಿ. ಪರಮೇಶ್ವರ್ ಗೃಹ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲರಾಗಿದ್ದು, ಪದೇಪದೆ ಸರ್ಕಾರ ಮುಜುಗರಕ್ಕೀಡಾಗುತ್ತಿರುವುದರಿಂದ ಪರಮೇಶ್ವರ್ ಅವರಿಗೆ ಬೇರೋಂದು ಖಾತೆ ನೀಡಿ ಹರಿಪ್ರಸಾದ್ ಅವರಿಗೆ ಗೃಹ ಖಾತೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಗುರುವಾರ ಬೆಳಿಗ್ಗೆ ಸಿದ್ದರಾಮಯ್ಯ ಮತ್ತು ಬಿಕೆ ಹರಿಪ್ರಸಾದ್ ಮಾತುಕತೆ ನಡೆಸಿದ್ದು ಸಂಪುಟ ವಿಸ್ತರಣೆ ಬಗ್ಗೆ ಹಾಗೂ ಖಾತೆ ಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


