ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ) ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ತಮ್ಮ ವಿರುದ್ಧ ಬೆಂಗಳೂರಿನ ಎಫ್ಟಿಎಸ್ ವಿಶೇಷ ಸೆಷನ್ಸ್ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ವಿರುದ್ಧ ಮಾಜಿ ಸಿಎಂ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ಪೋಕ್ಸೋ ಕೇಸ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತು.
ಮಾಜಿ ಸಿಎಂ ವಿರುದ್ಧ ದಾಖಲಾಗಿರುವ ಸೀಮಿತ ವಿಷಯದ ಪ್ರಕರಣ ಕುರಿತು ವಿಚಾರಣೆ ಕೋರಿ ಹೈಕೋರ್ಟ್ಗೆ ಮೊರೆ ಹೋಗಲು ಯಡಿಯೂರಪ್ಪಗೆ ಅವಕಾಶವಿದೆಯೇ ಎಂಬುದನ್ನು ತಿಳಿಸಲು ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪೋಕ್ಸೋ ಕೇಸಲ್ಲಿ ಆರೋಪಿಗಳಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವೈ.ಎಂ ಅರುಣ, ಎಂ. ರುದ್ರೇಶ್ ಮತ್ತು ಜಿ. ಮರಿಸ್ವಾಮಿ ಅವರಿಗೆ ಬೆಂಗಳೂರಿನ ಎಫ್ಟಿಎಸ್ ವಿಶೇಷ ಕೋರ್ಟ್ನ ನ್ಯಾಯಾಧೀಶೆ ಸುಜಾತಾ ಅವರು ಸಮನ್ಸ್ ಜಾರಿ ಮಾಡಿದ್ದರು.
ಆರೋಪಿಗಳು ಡಿಸೆಂಬರ್ 2 ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು. ಮುಂದಿನ 30 ದಿನಗಳ ಒಳಗೆ ಸಾಕ್ಷಿ ವಿಚಾರಣೆ ನಡೆಯಬೇಕು ಎಂದು ಸೂಚಿಸಿದ್ದರು. ಇದರ ವಿರುದ್ಧ ಆರೋಪಿಗಳು ಸುಪ್ರೀಂ ಮೊರೆ ಹೋಗಿದ್ದರು
ಪ್ರಕರಣದ ಹಿನ್ನೆಲೆ
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಸಂತ್ರಸ್ತೆಯ ತಾಯಿ 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ನಂತರ ಸಿಐಡಿಗೆ ತನಿಖೆ ವರ್ಗಾವಣೆಯಾಗಿತ್ತು.
ಸಿಐಡಿ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆನಂತರ ವಿಚಾರಣಾಧೀನ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹೊಸದಾಗಿ ಕಾಗ್ನಿಜೆನ್ಸ್ ಪಡೆದುಕೊಳ್ಳಲು ನಿರ್ದೇಶನ ನೀಡಿತ್ತು. ಎರಡನೇ ಬಾರಿಗೆ ಯಡಿಯೂರಪ್ಪ ಮತ್ತಿತರರು ಮತ್ತೆ ಸಂಜ್ಞೆ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು. ಈ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ನಲ್ಲಿ ಅದಕ್ಕೆ ತಡೆ ಬಿದ್ದಿದೆ.


