ತಿ.ನರಸೀಪುರ: ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿರಿಯ ಆರ್ ಎಸ್ ಎಸ್ ಮುಖಂಡ ತೋಟದಪ್ಪ ಬಸವರಾಜು ಎಚ್ಚರಿಕೆ ನೀಡಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಪತ್ರಿಕಾ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿ.ಸೋಮಣ್ಣ ಒಬ್ಬ ಅವಕಾಶವಾದಿ ರಾಜಕಾರಿಣಿ. ಜೆಡಿಎಸ್, ಕಾಂಗ್ರೆಸ್ ನಂತರ ಈಗ ಬಿಜೆಪಿಗೆ ಬಂದಿದ್ದಾರೆ. ಅವರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿದ್ದು, ಅವರು ರಾಜಕೀಯ ಅಧಿಕಾರಕ್ಕಾಗಿ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ. ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಲು ಕೇಂದ್ರದ ವರಿಷ್ಟರು ಮುಂದಾದರೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಒಂದು ಮತಕ್ಕೆ 2000 ರೂ.ಗಳನ್ನು ನೀಡುವ ಮುಖೇನ ಮತದಾರರನ್ನು ಭ್ರಷ್ಟಾಚಾರಿ ಗಳಾಗುವಂತೆ ಮಾಡಿದರು. ರಾಜ್ಯದಲ್ಲಿ ಸಾತ್ವಿಕ ರಾಜಕಾರಣಕ್ಕೆ ಹೆಸರಾಗಿದ್ದ ಬಿಜೆಪಿ ಪಕ್ಷದ ತತ್ವ ಸಿದ್ದಾoತಕ್ಕೆ ತಿಲಾoಜಲಿ ಇಟ್ಟರು ಎಂದು ಆರೋಪಿಸಿದರು.
ಬಿಜೆಪಿ ಹಿರಿಯ ನಾಯಕ ಶ್ರೀರಾಮುಲು ಇಲ್ಲವೇ ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರೆ ನಮ್ಮ ಅಭ್ಯಂತರವೇನು ಇಲ್ಲ. ಇದು ರಾಜ್ಯದ ಎಲ್ಲ ವರ್ಗದ ನಾಯಕರ ಸರ್ವಸಮ್ಮತವಾದ ಆಯ್ಕೆ. ಇದರಿಂದ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಲಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.ಇದನ್ನು ಬಿಟ್ಟು ಹೊರಗಡೆಯಿಂದ ಬಂದವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾಡಿದರೆ ರಾಜ್ಯದ ಕಾರ್ಯಕರ್ತರಲ್ಲಿ ಆಗುವ ಬದಲಾವಣೆಗೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ.ನಡ್ಡಾ, ಬಿ.ಎಲ್.
ಸಂತೋಷ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅದರ ಹೊಣೆ ಹೊರಬೇಕಾಗುತ್ತದೆ. ಇದರಿಂದ ಬಿಜೆಪಿಗೆ ಭಾರೀ ನಷ್ಟ ಉಂಟಾಗಲಿದೆ ಎಂದರು.
ಬಿಜೆಪಿ ಭ್ರಷ್ಟಾಚಾರ ಮತ್ತು ವಂಶ ಪಾರಂಪಾರ್ಯ ರಾಜಕಾರಣವನ್ನು ವಿರೋಧಿಸುತ್ತಾ ಬಂದಿತ್ತು. ಆದರೆ, ಕರ್ನಾಟಕ ರಾಜ್ಯದಲ್ಲಿ ಬಜೆಡಿಎಸ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇಂದು ಬಿಜೆಪಿ ಅಪಹಾಸ್ಯಕ್ಕೆ ಗುರಿಯಾಗಿದೆ.ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜತೆ ಮಾಡಿಕೊಂಡಿರುವ ಹೊಂದಾಣಿಕೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದರು.


