ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಂದಿರುವ ಕಲಾತ್ಮಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರನ್ನು ಭಾನುವಾರ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಖರೀದಿಸುವ ಸುಳಿವು ನೀಡಿದೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ ಕೆಎಲ್ ರಾಹುಲ್ ಅವರ ವೀಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಲಾತ್ಮಕ ಎಂಬುದು ನಮಗೆಲ್ಲರಿಗೂ ಗೊತ್ತಿದೆ ಎಂದು ಶೀರ್ಷಿಕೆ ಹಾಕುವ ಮೂಲಕ ಆರ್ ಸಿಬಿ ಅಭಿಮಾನಿಗಳಿಗೆ ಮಹತ್ವದ ಸುಳಿವು ನೀಡಿದೆ.
ಆರಂಭದಲ್ಲಿ ಆರ್ ಸಿಬಿ ತಂಡದಲ್ಲಿದ್ದ ಕೆಎಲ್ ರಾಹುಲ್ ನಂತರ ಹಲವಾರು ತಂಡಗಳಲ್ಲಿ ಆಡಿದ್ದರು. ಕಳೆದೆರಡು ಆವೃತ್ತಿಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್ ಅಸಮಾಧಾನದಿಂದ ಹೊರಗೆ ಬಂದಿದ್ದಾರೆ.
ಸೌದಿ ಅರೆಬಿಯಾದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕೆಎಲ್ ರಾಹುಲ್ ಅವರನ್ನು ಆರ್ ಸಿಬಿ ಸೆಳೆಯಲಿದೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಎಲ್ಲಾ ವದಂತಿಗಳಿಗೆ ನಾಳೆ ತೆರೆ ಬೀಳಲಿದ್ದು, ಇದಕ್ಕೂ ಮುನ್ನವೇ ತಂಡಕ್ಕೆ ಕರೆತರುವ ಬಗ್ಗೆ ಆರ್ ಸಿಬಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸುಳಿವು ನೀಡಿದೆ.
ಕೆಎಲ್ ರಾಹುಲ್ ಆರ್ ಸಿಬಿಗೆ ಬಂದರೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಡೆಯಲಿದ್ದಾರೆ. ಇವರಿಗೆ ಬೆಂಗಾವಲಾಗಿ ವಿರಾಟ್ ಕೊಹ್ಲಿ ನಿಲ್ಲಲಿದ್ದು, ಈಗಾಗಲೇ ತಂಡದಿಂದ ಬಿಟ್ಟುಕೊಟ್ಟಿರುವ ಆಟಗಾರರ ಪೈಕಿ ಯಾರನ್ನು ರಿಟೇನ್ ಟು ಮ್ಯಾಚ್ ಕಾರ್ಡ್ ಬಳಸಿ ಉಳಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.
ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಸೇರಿದಂತೆ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಆರ್ ಸಿಬಿ 80 ಕೋಟಿ ರೂ. ಹರಾಜಿನಲ್ಲಿ ಬಳಸುವ ಅವಕಾಶ ಪಡೆದಿದೆ. ಇದರಿಂದ ದೊಡ್ಡ ಮೊತ್ತದಲ್ಲಿ ಆಟಗಾರರನ್ನು ಖರೀದಿಸಲು ಯೋಜನೆ ರೂಪಿಸಲಾಗಿದೆ.
ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕೆಎಲ್ ರಾಹುಲ್, ಆರ್ ಸಿಬಿ ಪರ ಆಡಲು ನನಗೆ ಯಾವಾಗಲೂ ಖುಷಿ ಕೊಡುತ್ತದೆ. ಏಕೆಂದರೆ ತವರಿನಲ್ಲಿ ಆಡುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದರು.
https://twitter.com/RCBTweets/status/1860211704959021102