ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 214 ರನ್ ಕಠಿಣ ಸವಾಲೊಡ್ಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು.
ಆರ್ ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಜೇಕಬ್ ಬೆಥಾಲಿ ವೈಯಕ್ತಿಕ ಅರ್ಧಶತಕ ಸಿಡಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 97 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಆದರೆ ಕೊನೆಯಲ್ಲಿ ರೊಮಾರಿಯೊ ಶೆಫಾರ್ಡ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚು ಹರಿಸಿದರು.
ಬೆಥಾಲಿ 33 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 55 ರನ್ ಬಾರಿಸಿ ಔಟಾದರೆ, ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 62 ರನ್ ಗಳಿಸಿದರು. ಇವರಿಬ್ಬರು ಔಟಾದ ನಂತರ ಬಂದ ಬ್ಯಾಟ್ಸ್ ಮನ್ ಗಳು ಮಹೇಶ್ ಪತಿರಾಣ ದಾಳಿಗೆ ತತ್ತರಿಸಿ ರನ್ ಗಳಿಸಲು ಪರದಾಡಿದ್ದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ದೇವದತ್ ಪಡಿಕಲ್ (17), ನಾಯಕ ರಜತ್ ಪಟಿದರ್ (11), ಜಿತೇಶ್ ಕುಮಾರ್ (7) ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಟಿಮ್ ಡೇವಿಡ್ ಕ್ರಿಸ್ ಗೆ ಬಂದರೂ ಹೊಡಿಬಡಿ ಆಟಕ್ಕೆ ಮುಂದಾಗುವ ಮುನ್ನವೇ ರೊಮಾರಿಯೊ ಶೆಫಾರ್ಡ್ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 53 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಶೆಫಾರ್ಡ್ ಐಪಿಎಲ್ ನಲ್ಲಿ ಒಂದೇ ಓವರ್ ನಲ್ಲಿ 33 ರನ್ ಸೇರಿದಂತೆ ಎರಡನೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ಪತಿರಾಣ 3 ವಿಕೆಟ್ ಪಡೆದರೆ ಉಳಿದವರು ನಿರಾಸೆ ಮೂಡಿಸಿದರು.



