ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಮತ್ತು ವಕೀಲರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ವಕೀಲರನ್ನು ಹೊರದಬ್ಬಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಜಾಮೀನು ಮಂಜೂರು ಮಾಡುವ ವಿಷಯದಲ್ಲಿ ಗಾಜಿಯಾಬಾದ್ ಜಿಲ್ಲಾ ನ್ಯಾಯಾಧೀಶರು ಮತ್ತು ವಕೀಲರ ನಡುವೆ ವಾಗ್ವಾದ ಉಂಟಾಗಿದೆ. ಇದರಿಂದ ಸಿಟ್ಟಿಗೆದ್ದ ವಕೀಲರ ಗುಂಪು ನ್ಯಾಯಾಧೀಶರ ಕೊಠಡಿಗೆ ನುಗ್ಗಿ ಧಿಕ್ಕಾರ ಕೂಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ವಕೀಲರು ಏಕಾಏಕಿ ತಮ್ಮ ಕೊಠಡಿಗೆ ನುಗ್ಗಿದ್ದರಿಂದ ಆತಂಕಗೊಂಡ ನ್ಯಾಯಾಧೀಶರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಕುರ್ಚಿಗಳನ್ನು ಎಸೆದು ವಕೀಲರನ್ನು ಸ್ಥಳದಿಂದ ಹೊರಹಾಕಿದರು.
ಘಟನಾ ಸ್ಥಳಕ್ಕೆ ನಂತರ ಅರೆಸೇನಾ ಪಡೆ ಸಿಬ್ಬಂದಿ ಆಗಮಿಸಿದ್ದು, ಕೋರ್ಟ್ ಆವರಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯಲ್ಲಿ ಹಲವಾರು ವಕೀಲರು ಗಾಯಗೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಚರ್ಚಿಸಲು ವಕೀಲರ ಸಂಘವು ಈಗ ಸಭೆಯನ್ನು ಕರೆದಿದೆ ಎಂದು ವರದಿಗಳು ತಿಳಿಸಿವೆ.
ನ್ಯಾಯಾಧೀಶರ ಕೊಠಡಿಯಿಂದ ಹೊರಗೆ ಓಡಿಸಿದ ನಂತರ ವಕೀಲರು ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ, ಜಾಮೀನು ಅರ್ಜಿ ವಿಚಾರದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ನಡುವೆ ವಾಗ್ವಾದ ನಡೆದಿದೆ.