ಕೆಳ ಕ್ರಮಾಂಕದಲ್ಲಿ ಧ್ರುವ ಜುರೆಲ್ ಎರಡೂ ಇನಿಂಗ್ಸ್ ಗಳಲ್ಲಿ ಸಿಡಿಸಿದ ಶತಕದ ನೆರವಿನಿಂದ ಭಾರತ ಎ ತಂಡ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ತಂಡಕ್ಕೆ 417 ರನ್ ಗಳ ಕಠಿಣ ಗುರಿ ಒಡ್ಡಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 3 ವಿಕೆಟ್ ಗೆ 70 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ಎ ತಂಡ 7 ವಿಕೆಟ್ ಗೆ 362 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಎ ತಂಡ ಗೆಲ್ಲಲು 417 ರನ್ ಗುರಿ ಪಡೆಯಿತು. ದಿನದಾಂತ್ಯಕ್ಕೆ ವಿಕೆಟ್ ನಷ್ಟವಲ್ಲದೇ 25 ರನ್ ಗಳಿಸಿರುವ ದಕ್ಷಿಣ ಆಫ್ರಿಕಾ 392 ರನ್ ಗಳಿಸಬೇಕಾಗಿದೆ.
ಭಾರತ ಎ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ದೊಡ್ಡ ಮೊತ್ತ ಕಲೆ ಹಾಕಲು ವಿಫಲರಾದರು. ಆದರೆ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿ ಭರ್ಜರಿ ಫಾರ್ಮ್ ನಲ್ಲಿರುವ ಧ್ರುವ ಜುರೆಲ್ ಎರಡನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿ ಗಮನ ಸೆಳೆದರು.
ಧ್ರುವ ಜುರೆಲ್ 170 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ ಹರ್ಷ್ ದುಬೆ ಜೊತೆ 6ನೇ ವಿಕೆಟ್ ಗೆ 184 ರನ್ ಗಳ ಬೃಹತ್ ಮೊತ್ತದ ಜೊತೆಯಾಟ ನಿಭಾಯಿಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು . ದುಬೆ 116 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 84 ರನ್ ಬಾರಿಸಿ ಔಟಾದರು. ಇದಕ್ಕೂ ಮುನ್ನ ನಾಯಕ ರಿಷಭ್ ಪಂತ್ 65 ರನ್ ಗಳಿಸಿದರು.


